ಆಧುನಿಕ ಜೀವನಕ್ಕೆ ಹೊಂದಿಕೊಂಡಿರುವ ಜನರು ತಮ್ಮ ಬಾಯಾರಿಕೆ ನೀಗಿಸಲು ದೊಡ್ಡ ದೊಡ್ಡ ಕಂಪೆನಿಗಳ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಪಾರ್ಕ್, ಬೀಚ್ ಗಳಲ್ಲಿ ಎಳನೀರು ಮಾರುವವರು ಕಂಡು ಬರುತ್ತಿದ್ದರೆ, ಈಗಿನ ಕಾಲದಲ್ಲಿ ಬೇರೆ ಬೇರೆ ಕಂಪೆನಿಗಳ ಬಣ್ಣ ಬಣ್ಣದ ವರ್ಣರಂಜಿತ ಪಾನೀಯಗಳ ದರ್ಶನವಾಗುತ್ತದೆ. ಈ ಪಾನೀಯಗಳು ಎಷ್ಟು ಸುರಕ್ಷಿತ ಎನ್ನುವುದು ತಿಳಿಯದಿದ್ದರೂ, ಜನರು ಕಣ್ಣು ಮುಚ್ಚಿ ಅದನ್ನು ಸೇವಿಸುತ್ತಾರೆ.
ಪ್ರಕೃತಿ ದತ್ತವಾಗಿರುವ ಎಳೆನೀರು ಕೇವಲ ಬಾಯಾರಿಕೆ ಮಾತ್ರವಲ್ಲ. ನಮ್ಮ ದೇಹದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಜೋರಾಗಿ ಸುಸ್ತು ಆವರಿಸಿ, ನಮ್ಮ ದೇಹ ಚೈತನ್ಯ ಕಳೆದುಕೊಂಡರೆ ಒಂದು ಎಳನೀರು ಕುಡಿದರೆ ಸಾಕು. ಇಡೀ ದೇಹ ರೀಫ್ರೆಶ್ ಆದಂತೆ ಭಾಸವಾಗಿ ಮತ್ತೆ ದೇಹದಲ್ಲಿ ಶಕ್ತಿ ತುಂಬುತ್ತದೆ.
ಎಳೆನೀರು ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಮನುಷ್ಯನಿಗೆ ತೀವ್ರ ಸುಸ್ತು ಆಯಾಸವಾದಾಗ ಎಳೆನೀರು ನಮ್ಮದೇಹವನ್ನು ಪುನಶ್ಚೇತನ ಮಾಡುತ್ತದೆ. ಇದಲ್ಲದೇ ಮೂತ್ರ ಪಿಂಡವನ್ನು ಸ್ವಚ್ಛಗೊಳಿಸಲು ಕೂಡ ಎಳೆನೀರು ಸಹಾಯಕವಾಗಿದೆ. ಜೊತೆಗೆ ಮೂತ್ರಪಿಂಡದಲ್ಲಿ ಕಲ್ಲು ಆಗುವ ಸಮಸ್ಯೆಗಳಿದ್ದರೆ, 7 ದಿನಗಳ ಕಾಲ ಎಳೆನೀರನ್ನು ನಿಯಮಿತವಾಗಿ ಸೇವಿಸಿದರೆ, ಕಲ್ಲನ್ನು ಆಕಸ್ಮಿಕವಾಗಿ ತೆಗೆದು ಹಾಕುತ್ತದೆ.
ಎಳೆನೀರು ಪ್ರಸ್ತುತ ದುಬಾರಿಯಾಗಿರಬಹುದು. ಆದರೆ, ಅದು ನಮಗೆ ಬಹಳ ಬೆಲೆಬಾಳುವ ಆರೋಗ್ಯವನ್ನೇ ನೀಡುತ್ತದೆ. ಕೆಮಿಕಲ್ ಗಳನ್ನು ಬಳಸಿ ವಿವಿಧ ಫ್ಲೇವರ್ ಗಳನ್ನು ಹಾಕಿದ ಜ್ಯೂಸ್ ಗಳನ್ನು ಕುಡಿಯುವುದನ್ನು ಬಿಟ್ಟು ದಿನದಲ್ಲಿ ಒಂದು ಎಳೆನೀರು ಸೇವಿಸಿದರೆ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ.