ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪರವಾಗಿ ನಟಿಯರು ಧ್ವನಿಯೆತ್ತುತ್ತಿದ್ದು, ಪುರುಷರ ಮನಸ್ಥಿತಿಗಳ ವಿರುದ್ಧ ನಟಿಯರು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಧ್ವನಿಯೆತ್ತಿದ ಬೆನ್ನಲ್ಲೇ ಇದೀಗ ನಟಿ ಶೃತಿ ಕೂಡ ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ? ಇಂತಹ ಪುರುಷರ ಮನಸ್ಥಿತಿ ಬದಲಾಗುವುದೆಂದು ಎಂದು ನಟಿ ಶೃತಿ ಮಾರ್ಮಿಕವಾಗಿ ಪ್ರಶ್ನಿಸಿದ್ದು, ಅನಿಷ್ಟ ಕಾಮುಕರನ್ನು ಬಂಧಿಸುವ, ಅವರನ್ನು ಶಿಕ್ಷಿಸುವ ಕಾನೂನು ಮತ್ತಷ್ಟು ಗಟ್ಟಿಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರುಷರು ಬೆಳೆಯುವ ಮನೆಯ ವಾತಾವರಣ, ಸಂಸ್ಕಾರ, ಪೋಷಕರ ಜವಾಬ್ದಾರಿ ಅಲ್ಲಿಯೂ ಕೂಡ ಮತ್ತಷ್ಟು ಗಟ್ಟಿಯಾಗಬೇಕು ಎನ್ನುವುದು ನನ್ನ ಅಭಿಪ್ರಾಯ. ಹುಟ್ಟಿನಿಂದ ಸಾವಿನ ವರೆಗೆ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟ ನೂರಾರು ಆದರೂ, ಹಲವಾರು ಮಹಿಳೆಯರು ಅದನ್ನು ಹಿಮ್ಮೆಟ್ಟಿ ಇಡೀ ಭಾರತವೇ ಮೆಚ್ಚುವಂತಹ ಸಾಧನೆಯನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆಗಳು ಮಹಿಳೆಯರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಹಾಗಾಗದಿರಲಿ ಎಂದು ಶೃತಿ ಹೇಳಿದ್ದಾರೆ.