ಧಾರವಾಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತನ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಗೋವಾದಿಂದ ಬಂದಿರುವ ಐವರು ಐಟಿ ಅಧಿಕಾರಿಗಳು ಮನೆ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಡಿ.ಕೆ.ಶಿವಕುಮಾರ್ ಅವರ ಆಪ್ತ, ಗುತ್ತಿಗೆದಾರ ಯು.ಬಿ.ಶೆಟ್ಟಿ ಮನೆಗೆ ಐಟಿ ದಾಳಿ ನಡೆದಿದ್ದು, ಧಾರವಾಡದ ದಾಸನಕೊಪ್ಪ ಸರ್ಕಲ್ ನಲ್ಲಿ ಯು.ಬಿ.ಶೆಟ್ಟಿ ಮನೆ ಇದೆ. ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಆಪ್ತರಾದ ರಾಬರ್ಟ್ ದದ್ದಾಪುರಿ ಮತ್ತು ಆನಂದ ಜಾಧವ್ಗೆ ಐಟಿ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರಿಬ್ಬರೂ ಯು.ಬಿ. ಶೆಟ್ಟಿ ಮನೆಗೆ ಆಗಮಿಸಿದಾಗ ಅವರನ್ನೂ ಅಧಿಕಾರಿಗಳು ಮನೆಯೊಳಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ, ನಮಗೆ ಒಳಗೆ ಹೋಗಲು ಬಿಡಲಿಲ್ಲ. ಬಳಿಕ ಶೆಟ್ಟಿ ಅವರೇ ಫೋನ್ ಮಾಡಿದರು. ಇಬ್ಬರು ಸಾಕ್ಷಿ ಬೇಕು ಅಂತಾ ಕೇಳಿದರು. ಇಬ್ಬರು ಸಾಕ್ಷಿದಾರರನ್ನು ಕೊಟ್ಟಿದ್ದೇವೆ. ಇತ್ತೀಚಿಗೆ ಅವರು ಶಿಕ್ಷಣ ಕ್ಷೇತ್ರಕ್ಕೆ ಬಂದಿದ್ದಾರೆ. ಇತ್ತೀಚಿಗೆ ಗುತ್ತಿಗೆ ಕಾಮಗಾರಿ ಬಿಟ್ಟಿದ್ದಾರೆ. 80 ನೇ ಇಸ್ವಿಯಿಂದಲೂ ಡಿಕೆ ಶಿವಕುಮಾರ್ ಅವರೊಂದಿಗೆ ಒಡನಾಟ ಹೊಂದಿದ್ದಾರೆ. ಉಡುಪಿ, ಮಂಗಳೂರಿನಲ್ಲಿ ಚುನಾವಣೆಗೆ ಶೆಟ್ಟಿ ಯತ್ನಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ದಾಳಿಯಾಗಿರಬಹುದು ಎಂದು ಅವರು ಹೇಳಿದರು.