ಮಹಾನಾಯಕ ಡಾಟ್ ಇನ್(www.mahanayaka.in) ಅಂತರ್ಜಾಲ ಮಾಧ್ಯಮವು 2020 ಅಕ್ಟೋಬರ್ 20ರಂದು ಓದುಗರಿಂದಲೇ ಲೋಕಾರ್ಪಣೆಯಾಯಿತು. ಇದೀಗ ಮಹಾನಾಯಕ ಅಂತರ್ಜಾಲ ಮಾಧ್ಯಮ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಮಹಾನಾಯಕ ಮಾಧ್ಯಮವನ್ನು ಬಹಳಷ್ಟು ಪ್ರೀತಿಯಿಂದ ಜನರು ಸ್ವೀಕರಿಸಿದ್ದಾರೆ. ಮಾಧ್ಯಮದ ಉತ್ತಮ ಅಂಶಗಳನ್ನು ಗಮನಿಸಿ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ತಪ್ಪುಗಳು ಕಂಡು ಬಂದಾಗ ನಮ್ಮ ಗಮನಕ್ಕೆ ತಂದು ಅವುಗಳನ್ನು ತಿದ್ದುವ ಕೆಲಸವನ್ನೂ ಮಾಡಿದ್ದಾರೆ. ಹೀಗೆ ಓದುಗರಿಂದಲೇ ಉದ್ಘಾಟನೆಗೊಂಡ ಮಹಾನಾಯಕ ಮಾಧ್ಯಮ ಕೇವಲ ಒಂದೇ ವರ್ಷಗಳಲ್ಲಿ ಲಕ್ಷಾಂತರ ಓದುಗರ ಅಚ್ಚುಮೆಚ್ಚಿನ ತಾಣವಾಗಿದೆ. ಓದುಗರ ಈ ಪ್ರೀತಿ ವಿಶ್ವಾಸಕ್ಕೆ ಮಹಾನಾಯಕ ಬಳಗ ಆಭಾರಿಯಾಗಿದೆ.
ಈ ಒಂದು ವರ್ಷಗಳ ಅವಧಿಯಲ್ಲಿ ಸಾವಿರಾರು ಆನ್ ಲೈನ್ ಮಾಧ್ಯಮಗಳ ನಡುವೆಯೇ ಮಹಾನಾಯಕ ಮಾಧ್ಯಮವನ್ನು ಓದುಗರು ಪ್ರತ್ಯೇಕವಾಗಿ ಗುರುತಿಸಿದ್ದಾರೆ. ಸರ್ಕಾರದ, ಜನಪ್ರತಿನಿಧಿಗಳ ತಪ್ಪುಗಳನ್ನು ಎತ್ತಿತೋರಿಸಲು ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಬಳಸಿಕೊಂಡಿದ್ದಾರೆ. ರಾಜ್ಯದಲ್ಲಿ ಶೋಷಿತ ಜನರ ಸಂಕಷ್ಟಗಳು, ದಲಿತ ದೌರ್ಜನ್ಯಗಳು, ಅಸ್ಪೃಷ್ಯತೆ ಆಚರಣೆ, ಕೋಮುವಾದ, ಧಾರ್ಮಿಕ ಅಸಮಾನತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮೊದಲಾದ ಘಟನೆಗಳ ಸಂದರ್ಭದಲ್ಲಿ ಜಾತಿ, ಧರ್ಮ, ಪಕ್ಷ ಎಂದು ನೋಡದೇ ನೇರವಾಗಿ ಮಹಾನಾಯಕ ಮಾಧ್ಯಮ ಅವುಗಳನ್ನು ಟೀಕಿಸಿದೆ. ನಮ್ಮ ಸುತ್ತಮುತ್ತಲಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಸುದ್ದಿಗಳಲ್ಲಿ, ಜನರ ಮನಸ್ಥಿತಿಗಳನ್ನು ಬದಲಿಸುವಂತಹ ಸಲಹೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ಇಳಿಕೆ ಮಾಡಲು ಮಹಾನಾಯಕ ಮಾಧ್ಯಮ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ.
ಓದುಗರ ಮನವಿಯ ಮೇರೆಗೆ ವೈದ್ಯಕೀಯ ನೆರವುಗಳಂತಹ ಸುದ್ದಿಗಳ ಮೂಲಕ ಜನರಿಂದಲೇ ಸಹಕಾರ ನೀಡಲು ಮನವಿ ಮಾಡುವ ಮೂಲಕ ಒಂದಷ್ಟು ನೆರವುಗಳನ್ನು ನೇರವಾಗಿ ಸಂತ್ರಸ್ತರಿಗೆ ಕೊಡಿಸುವ ಮೂಲಕ ನೊಂದವರಿಗೆ ಮಾಧ್ಯಮ ಸಾಂತ್ವಾನ ಹೇಳಿದೆ. ಆದರೆ, ಮಹಾನಾಯಕ ಮಾಧ್ಯಮ ಇಂತಹ ಯಾವುದೇ ಉತ್ತಮ ಕೆಲಸಗಳ ಬಗ್ಗೆ ಫೋಟೋಗಳನ್ನು ಹಾಕಿಸಿಕೊಂಡು, ಬಿಟ್ಟಿ ಪ್ರಚಾರ ಪಡೆಯುವ ಕೆಲಸವನ್ನು ಮಾಡಿಲ್ಲ.
ಮಹಾನಾಯಕ ಅಂತರ್ಜಾಲ ಮಾಧ್ಯಮವು ಯೂಟ್ಯೂಬ್ ಚಾನೆಲ್ ಮೂಲಕವೂ ಲೈವ್ ಸುದ್ದಿಗಳನ್ನು ಮಾಡುವ ನಿರೀಕ್ಷೆಯನ್ನು ಹೊಂದಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಒಂದು ಸ್ವತಂತ್ರ ಪೂರ್ಣ ಪ್ರಮಾಣದ ಸುದ್ದಿವಾಹಿನಿಯನ್ನು ಆರಂಭಿಸುವುದು ಮಾಧ್ಯಮದ ಗುರಿಯಾಗಿದೆ. ಮಹಾನಾಯಕ ಅಂತರ್ಜಾಲ ಮಾಧ್ಯಮವು ಶೋಷಿತರ, ನೊಂದವರ ಧ್ವನಿಯಾಗಿ ಮುನ್ನುಗ್ಗುತ್ತಿದೆ. ಮಾಧ್ಯಮ ಆರಂಭದಲ್ಲಿ ಒಂದು ತಿಂಗಳ ಅವಧಿಯಲ್ಲಿ ಕೆಲವು ಓದುಗ ಮಿತ್ರರು ಮಾಧ್ಯಮಕ್ಕೆ ಆರ್ಥಿಕವಾಗಿ ಸಣ್ಣಪುಟ್ಟ ನೆರವು ನೀಡಿದ್ದರು. ಆ ಬಳಿಕ ಮಾಧ್ಯಮವು ತನ್ನ ಸ್ವಂತ ಶಕ್ತಿಯಲ್ಲಿಯೇ ಈವರೆಗೆ ಮಾಧ್ಯಮವನ್ನು ಮುಂದುವರಿಸಿಕೊಂಡು ಬಂದಿದೆ. ಆದರೆ, ಮಹಾನಾಯಕ ಮಾಧ್ಯಮವು ಹೆಚ್ಚಿನ ವ್ಯಾಪ್ತಿಯನ್ನು ತಲುಪಲು ಆರ್ಥಿಕ ಸಮಸ್ಯೆ ತೊಡಕಾಗಿರುವುದು ಸತ್ಯವೇ ಆಗಿದೆ.
ಮಾಧ್ಯಮ ಒಂದು ವರ್ಷ ಪೂರೈಸಿರುವ ಬೆನ್ನಲ್ಲೇ ಮಹಾನಾಯಕ ಮಾಧ್ಯಮದ ಓದುಗರ ನಿರೀಕ್ಷೆಗಳು ಕೂಡ ಹೆಚ್ಚಾಗಿದೆ. ಪ್ರತಿ ಜಿಲ್ಲೆ, ತಾಲೂಕು ವ್ಯಾಪ್ತಿಗಳ ಸುದ್ದಿಗಳನ್ನು ಪ್ರಕಟಿಸುವಂತೆ ಓದುಗರು ಮನವಿ ಮಾಡಿಕೊಂಡಿದ್ದಾರೆ. ಖಂಡಿತವಾಗಿಯೂ ಈ ನಿಟ್ಟಿನಲ್ಲಿ ನಾವು ಕೂಡ ಯೋಚಿಸಿದ್ದೇವೆ. ಮಹಾನಾಯಕ ಮಾಧ್ಯಮದ ಸುದ್ದಿಗಳು ಪ್ರತಿಯೊಂದು ಜಿಲ್ಲೆಗಳನ್ನು ಕೂಡ ತಲುಪುವಲ್ಲಿ ನಮ ಮುಂದಿನ ದೃಷ್ಟಿ ನೆಟ್ಟಿದ್ದೇವೆ. ಈವರೆಗೆ ಓದುಗರು ನೀಡಿದ ಸಹಕಾರಗಳಿಗಿಂತಲೂ ಹೆಚ್ಚಿನ ಬೆಂಬಲ ಪ್ರೋತ್ಸಾಹ ನೀಡುವ ಮೂಲಕ ಮಾಧ್ಯಮದ ಬೆಳವಣಿಗೆಗೆ ಸಹಕಾರಿಯಾಗುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ.