ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಜಿಮ್ ಸೆಂಟರ್ ಗಳನ್ನು ಬಂದ್ ಮಾಡಿ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲು ನಿರ್ಧರಿಸಿವೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ ಎಂದಿನಂತೆಯೇ ಪುನೀತ್ ರಾಜ್ ಕುಮಾರ್ ಅವರು ಸುಮಾರು ಎರಡು ಗಂಟೆಗಳ ಕಾಲ ಜಿಮ್ ನಲ್ಲಿ ಕಸರತ್ತು ನಡೆಸಿದ್ದಾರೆ. ಸುಮಾರು 10 ಗಂಟೆಯ ವೇಳೆಗೆ ಅವರಿಗೆ ಭಾರೀ ಪ್ರಮಾಣದಲ್ಲಿ ಹೃದಯಾಘಾತವಾಗಿದೆ. ಜಿಮ್ ವೇಳೆ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜವಾಗಿದೆ. ಹಾಗಾಗಿ ಇದು ಸಣ್ಣಪುಟ್ಟ ನೋವು ಅಂದುಕೊಂಡು ಪುನೀತ್ ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ.
ಆದರೂ ಕುಟುಂಬದ ವೈದ್ಯರ ಬಳಿಗೆ ಹೋಗಿ ತೋರಿಸಿದ್ದಾರೆ. ಈ ವೇಳೆ ವೈದ್ಯರಿಗೆ ಪರಿಸ್ಥಿತಿಯ ಗಂಭೀರತೆ ತಿಳಿದು ಬಂದಿದ್ದು, ಅವರು ತಕ್ಷಣವೇ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಪುನೀತ್ ರಾಜ್ ಕುಮಾರ್ ಅವರ ಹಾರ್ಟ್ ಬೀಟ್ ತೀವ್ರವಾಗಿ ಕುಸಿದಿತ್ತು ಎನ್ನಲಾಗಿದೆ. ಆ ಬಳಿಕ ಲೈಫ್ ಸಪೋರ್ಟಿಂಗ್ ವ್ಯವಸ್ಥೆಯ ಜೊತೆಗೆ ವೈದ್ಯಕೀಯ ಚಿಕಿತ್ಸೆ ಕೂಡ ನೀಡಲಾಯಿತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ವರದಿಯಾಗಿದೆ.
ಪುನೀತ್ ರಾಜ್ ಕುಮಾರ್ ಅವರು ಅತೀಯಾಗಿ ಜಿಮ್ ಮಾಡುವ ಹವ್ಯಾಸ ಹೊಂದಿದ್ದರು. ಇದೇ ಅವರ ಪ್ರಾಣಕ್ಕೆ ಮುಳುವಾಗಿದೆ ಎನ್ನುವ ಮಾತುಗಳು ಕೂಡ ಇದೀಗ ಕೇಳಿ ಬಂದಿದೆ. ಸಾಮಾನ್ಯವಾಗಿ ಹೆಚ್ಚಿನವರು ಅರ್ಧ ಗಂಟೆಯಿಂದ 1 ಗಂಟೆಯವರೆಗೆ ಜಿಮ್ ಮಾಡುತ್ತಾರೆ. ಆದರೆ, ಪುನೀತ್ ರಾಜ್ ಕುಮಾರ್ ಅವರು 2 ಗಂಟೆಯವರೆಗೆ ಜಿಮ್ ಮಾಡುತ್ತಿದ್ದರು ಎನ್ನಲಾಗಿದೆ.