ದಾವಣಗೆರೆ: ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಮಕ್ಕಳಿಗೆ ಪಾಠ ಮಾಡಲು, ಸಂಸಾರ ನೋಡಿಕೊಳ್ಳಲು ಅಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿಕೆ ನೀಡಿದ್ದು, ಶಿಕ್ಷಕರ ಸಮಸ್ಯೆಗಿಂತ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಹೇಳಿದರು.
ದಾವಣಗೆರೆ ಜಿಲ್ಲೆ ಬೆಳಲಗೆರೆ ಗ್ರಾಮದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ 3 ವರ್ಷದಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಿಂತಿತ್ತು. 2 ದಿನದಿಂದ ವರ್ಗಾವಣೆ ಪ್ರಕ್ರಿಯೆ ಮತ್ತೆ ಶುರುವಾಗಿದೆ. ರಾಜ್ಯದ ಎಲ್ಲಾ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಕೆಲ ವೈಯಕ್ತಿಕ ಸಮಸ್ಯೆಯನ್ನು ಸಾಮೂಹಿಕ ಸಮಸ್ಯೆ ಎಂದು ಬಿಂಬಿಸಲಾಗದು. ಶಿಕ್ಷಕ ವೃತ್ತಿಗೆ ಸೇರುವಾಗ ಜಿಲ್ಲಾವಾರು ಆಯ್ಕೆ ಗೊತ್ತಿರಲಿಲ್ಲವೆ? ನಾವು ಶಿಕ್ಷಕರನ್ನು ನೇಮಕ ಮಾಡಿರುವುದು ಪಾಠ ಮಾಡಲಿಕ್ಕೆ. ಸಂಸಾರ ನೋಡಿಕೊಳ್ಳುವುದಕ್ಕಲ್ಲ ಎಂದು ಬಿ.ಸಿ.ನಾಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರ ಸಮಸ್ಯೆಗಿಂತ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು. ನಂತರ ಜಿಲ್ಲಾವಾರು ಶಿಕ್ಷಕರ ಸಮಸ್ಯೆ ಬಗೆಹರಿಸುತ್ತೇವೆ. ಸದ್ಯದಲ್ಲೇ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು. ಶಿಕ್ಷಕರ ಸಮಸ್ಯೆ ಸಂಬಂಧ ಸಚಿವರು ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.