ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ (KPSC) ಮೂಲಕ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ (ಗ್ರೂಪ್ ಎ ಮತ್ತು ಬಿ) ನೇಮಕಾತಿಯನ್ನು ಇನ್ಮುಂದೆ ಪ್ರತಿ ವರ್ಷ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ನಾಲ್ಕು ವರ್ಷಕ್ಕೊಮ್ಮೆ ಹೊರಡಿಸಲಾಗುತ್ತಿದ್ದ ನೇಮಕಾತಿ ಅಧಿಸೂಚನೆಯಿಂದಾಗಿ ಅಭ್ಯರ್ಥಿಗಳಿಗೆ ವಯೋಮಿತಿಯ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ತಪ್ಪಿಸಲು ಯುಪಿಎಸ್ ಸಿ (UPSC) ಮಾದರಿಯಲ್ಲಿ ಪ್ರತಿವರ್ಷ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.
ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಮತ್ತು ನ್ಯಾಯಾಂಗ ವ್ಯಾಜ್ಯಗಳನ್ನು ತಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅನುಸರಿಸುವ ಅತ್ಯುತ್ತಮ ಕ್ರಮಗಳನ್ನು ಕೆಪಿಎಸ್‌ಸಿಯಲ್ಲೂ ಜಾರಿಗೆ ತರಲಾಗುವುದು.
ಖಾಲಿ ಹುದ್ದೆಗಳ ಅಂದಾಜು ಮಾಡಿ, ಐದು ವರ್ಷಗಳ ಮುಂಚಿತವಾಗಿಯೇ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಕೆಪಿಎಸ್ ಸಿಯಲ್ಲಿನ ಭ್ರಷ್ಟಾಚಾರ ತಡೆಗಟ್ಟಲು ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ತರಲು ಎಲ್ಲಾ ಪಕ್ಷಗಳ ಶಾಸಕರನ್ನೊಳಗೊಂಡ ‘ಸದನ ಸಮಿತಿ’ಯನ್ನು ರಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಇತ್ತೀಚೆಗೆ ನಡೆದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಉತ್ತರಿಸಿದ ಸಚಿವರು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ. ಆದ್ದರಿಂದ ಈಗ ಮರುಪರೀಕ್ಷೆ ನಡೆಸುವುದು ಸಾಧ್ಯವಿಲ್ಲ, ಅದು ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ವಿಳಂಬಗೊಳಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಕೆಪಿಎಸ್ ಸಿ ಸದಸ್ಯರ ಸಂಖ್ಯೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವ ಮೂಲಕ ಸಂಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈಗಾಗಲೇ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗಿದೆ ಎಂದು ಕೃಷ್ಣ ಬೈರೇಗೌಡ ಸದನಕ್ಕೆ ಮಾಹಿತಿ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


