ಕವಟಗಿಮಠ ಮನೆತನ ಶಿಕ್ಷಣ, ಕೃಷಿ, ಸಹಕಾರಿ, ವ್ಯಾಪಾರ, ಸರಾಫಿ ವೃತ್ತಿ ಹಾಗೂ ರಾಜಕೀಯದಲ್ಲಿ ಮಹತ್ತರವಾಗಿ ತೊಡಗಿಸಿಕೊಂಡು ಕಳೆದ ಮೂರು ತಲೆಮಾರುಗಳಿಂದ ಸಮಾಜಮುಖಿಯಾಗಿ ದಾಖಲಾರ್ಹ ಕೊಡುಗೆಯನ್ನು ನೀಡುತ್ತಾ ಬಂದಿದೆ.
ಸಹಕಾರಿ ಕ್ಷೇತ್ರದ ಶಕ್ತಿ ಕಲ್ಲಯ್ಯಸ್ವಾಮಿ ಕವಟಗಿಮಠ:
ಮಹಾಂತೇಶ ಕವಟಗಿಮಠ ಅವರ ಅಜ್ಜನವರಾದ ಕಲ್ಲಯ್ಯನವರು ಪ್ರಯತ್ನ ಶೀಲತೆಗೆ ವ್ಯಾಖ್ಯಾನವಾಗಿದ್ದರು. ಕೃಷಿ, ವಾಣಿಜ್ಯಗಳಲ್ಲದೇ ಸಹಕಾರಿ ಕ್ಷೇತ್ರದಲ್ಲಿ ಯೂತಮ್ಮ ಹೆಜ್ಜೆಗುರುತುಗಳನ್ನು ಅಚ್ಚಳಿಯದೆ ಮೂಡಿಸಿದ್ದರು.
ಹತ್ತೊಂಬತ್ತರ ಹರೆಯದಲ್ಲಿಯೇ ಸಹಕಾರಿ ಕ್ಷೇತ್ರಕ್ಕೆ ಕಾಲಿರಿಸಿ, ಚಿಕ್ಕೋಡಿ ಭಾಗದಲ್ಲಿ ಸಹಕಾರಿ ತತ್ವವನ್ನು ಪ್ರಚಾರಗೊಳಿಸಿದ ಶ್ರೇಯಸ್ಸು ಕಲ್ಲಯ್ಯ ಸ್ವಾಮಿಯವರಿಗೆ ಸಲ್ಲುತ್ತದೆ. ಸಹಕಾರ ತತ್ವಗಳ ಅನುಷ್ಠಾನಕ್ಕೆ ಕಟಿಬದ್ಧರಾಗಿ ಅಂದು ಗೆಳೆಯರೊಂದಿಗೆ ಚಿಕ್ಕೋಡಿ ಭಾಗದಲ್ಲಿ ನೆಟ್ಟ ಸಹಕಾರದ ಮರಇಂದು ಹೆಮ್ಮರವಾಗಿ ಬೆಳೆದಿದೆ.
ಚಿಕ್ಕೋಡಿಯ ಭಾಗದಲ್ಲಿ ಸಹಕಾರಕ್ಷೇತ್ರದ ಮೊದಲ ಸಂಸ್ಥೆ ಎಲ್.ಎಸ್.ಎಂ.ಪಿ. ಸೊಸೈಟಿಯು 1914ರಲ್ಲಿ ಸ್ಥಾಪನೆಗೊಂಡಿತು. 1914 ರಿಂದ 1949ರ ವರೆಗೂ ಅವರು ಈ ಸಂಸ್ಥೆಯ ಕಾರ್ಯಕಾರಿ ಸದಸ್ಯರಾಗಿ ಕೆಲವು ಅವಧಿಗೆ ಅವರು ಈ ಸಂಸ್ಥೆಯ ಚೇಅರ್‌ಮನ್‌ರಾಗಿ ಸೇವೆಸಲ್ಲಿಸಿದರು.
ಕಲ್ಲಯ್ಯಸ್ವಾಮಿಯವರು ಸತತ ಇಪ್ಪತ್ತೈದು ವರ್ಷಗಳ ಕಾಲ ತಾಲೂಕಾ ಅಭಿವೃದ್ಧಿ ಸಂಘದ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಚಿಕ್ಕೋಡಿ ಭಾಗದಲ್ಲಿ ಜನಹಿತ ಕಾರ್ಯಗಳಲ್ಲಿ ತೊಡಗಿದರು. ಹದಿನಾರು ವರ್ಷಗಳ ಕಾಲ ಕೆ.ಎಲ್.ಇ ಸಂಸ್ಥೆ ನಿರ್ದೇಶಕರಾಗಿ, ಚಿಕ್ಕೋಡಿ ತಾಲೂಕಾ ಕೋ ಆಪರೇಟಿವ್ ಸುಪರ್‌ವೈಸಿಂಗ್ ಸಿಬ್ಬಂದಿಗಳ ಸಂಘದ ಚೇರ್‌ಮನ್‌ರಾಗಿ, ಬೆಳಗಾವಿ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಕೋ ಆಪರೇಟಿವ್ ಇನಸ್ಟಿಟ್ಯೂಟ್ ಬೆಳಗಾವಿಯ ನಿರ್ದೇಶಕರಾಗಿ, ಖರೀದಿ ಮತ್ತು ಮಾರಾಟಗಾರರ ಯೂನಿಯನ್ ಬೆಳಗಾವಿಯ ನಿರ್ದೇಶಕರಾಗಿ, ಡಿಸ್ಟಿಕ್ಟ್ ಲ್ಯಾಂಡ್ ಮಾರ್ಟಗೇಜ್ ಬ್ಯಾಂಕ್‌ನ ನಿರ್ದೇಶಕರಾಗಿ, ಡಿ.ಸಿ.ಸಿ. ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾಗಿ, ಬೆಳಗಾವಿ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕಿನ ಚಿಕ್ಕೋಡಿ ಶಾಖೆಯ ಚೇರ್‌ಮನ್‌ರಾಗಿ ಆಯ್ಕೆಗೊಂಡು ಸಲ್ಲಿಸಿದ ಸೇವೆ ಅನುಪಮ ಹಾಗೂ ಚಿರಸ್ಮರಣೀಯ.
ರೈತರ ಮನೆಬಾಗಿಲಿಗೆ ಅನೇಕ ಸೌಲಭ್ಯಗಳು ತಲುಪುವಂತೆ ಕಾರ್ಯವೆಸಗಿ ಸಹಕಾರ ಚಳವಳಿಗೆ ಜೀವತುಂಬಿದರು. ಹೀಗಾಗಿ ಚಿಕ್ಕೋಡಿಯ ಭಾಗದ ಜನಮಾನಸದಲ್ಲಿ ಕಲ್ಲಯ್ಯಸ್ವಾಮಿಗಳು ಇಂದಿಗೂ ಪ್ರಾತಃಸ್ಮರಣೀಯರು.
ಕಲ್ಲಯ್ಯಸ್ವಾಮಿಗಳ ಕಾರ್ಯವ್ಯಾಪ್ತಿ ಬೆಳಗಾವಿ ಜಿಲ್ಲೆಯನ್ನೂ ಮೀರಿ ಮುಂಬೈ ಕರ್ನಾಟಕ ಮಟ್ಟಕ್ಕೆ ಏರಿತು. ಅವರನ್ನು “ಮುಂಬೈ ಕರ್ನಾಟಕ ಏರಿಯಾ ಕೋ ಆಪರೇಟಿವ್ ಅಡ್ವೆöಸರಿ ಕಮೀಟಿ ಧಾರವಾಡ”ದ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಹಾಗೆಯೇ “ಮುಂಬೈ ಪ್ರಾವ್ಹಿಜನ್ ಕೋ ಆಪರೇಟಿವ್ ಬೋರ್ಡ್”ನ ಸದಸ್ಯರನ್ನಾಗಿಯೂ ನೇಮಿಸಲಾಯಿತು ಎಂದರೆ ಅವರ ಸಹಕಾರಿ ಕ್ಷೇತ್ರದ ವ್ಯಾಪ್ತಿಗೆ ಹಿಡಿದ ಕನ್ನಡಿಯಾಗಿದೆ. ಮಾತ್ರವಲ್ಲ ಕಲ್ಲಯ್ಯಸ್ವಾಮಿಗಳು ಭಾರತದ ಸ್ವಾತಂತ್ರ್ಯದ ಚಳುವಳಿಯಲ್ಲಿ ಸಕ್ರಿಯ ಪಾತ್ರವನ್ನು ನಿರ್ವಹಿಸಿದವರು. ಮಹಾತ್ಮಾ ಗಾಂಧೀಜಿಯವರ ಕರೆಯ ಮೇರೆಗೆ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿ ಖಾದಿಯ ಉಡುಪುಗಳನ್ನೇ ಕೊನೆಯವರೆಗೂ ಧರಿಸಿದರು.
ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರಾಗಿ, ಚಿಕ್ಕೋಡಿಯ ಆರ್.ಡಿ.ಹೈಸ್ಕೂಲು ಕಮೀಟಿಯ ಖಾಯಂ ಸದಸ್ಯರಾಗಿ, ಬೆಳಗಾವಿ ಜಿಲ್ಲೆಯ ಸ್ಕೂಲ್ ಬೋರ್ಡಿನ ಚೇಅರ್‌ಮನ್‌ರಾಗಿ, ಹೀಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಮೌಲಿಕ ಸೇವೆ ಸಲ್ಲಿಸಿದವರು.


