ಬೆಂಗಳೂರು: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ 1,600ಕ್ಕೂ ಹೆಚ್ಚು ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್.ಎ. ಮುಂಡ್ಕೂರ್ ಅಗ್ನಿಶಾಮಕ ತರಬೇತಿ ಅಕಾಡೆಮಿಯಲ್ಲಿ ನಡೆದ ‘ಮುಖ್ಯಮಂತ್ರಿಗಳ ಪದಕ’ ಪ್ರದಾನ ಸಮಾರಂಭ ಹಾಗೂ 40 ಹೊಸ ಅಗ್ನಿಶಾಮಕ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಹಂಚಿಕೊಂಡರು.
ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು 1,600 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯದ 15 ಹೊಸ ತಾಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಪೊಲೀಸ್ ಇಲಾಖೆಯ ‘ಪೊಲೀಸ್ ಗೃಹ’ ಯೋಜನೆಯ ಮಾದರಿಯಲ್ಲೇ ಅಗ್ನಿಶಾಮಕ ಸಿಬ್ಬಂದಿಗೂ ವಸತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಅಲ್ಲದೇ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಹುಮಹಡಿ ಕಟ್ಟಡಗಳ ಅಗ್ನಿ ಅವಘಡಗಳನ್ನು ತಡೆಯಲು 90 ಮೀಟರ್ ಎತ್ತರದವರೆಗೆ ತಲುಪಬಲ್ಲ ಆಧುನಿಕ ‘ಏರಿಯಲ್ ಲ್ಯಾಡರ್ ಪ್ಲಾಟ್‌ಫಾರ್ಮ್’ ವಾಹನ ಸೇರಿದಂತೆ ಸುಸಜ್ಜಿತ ಸಲಕರಣೆಗಳನ್ನು ಒದಗಿಸಲಾಗಿದೆ ಎಂದರು.
15ನೇ ಹಣಕಾಸು ಯೋಜನೆಯಡಿ 329 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಈಗಾಗಲೇ 21 ಹೊಸ ಠಾಣೆಗಳ ನಿರ್ಮಾಣಕ್ಕೆ 98 ಕೋಟಿ ರೂ. ವ್ಯಯಿಸಲಾಗಿದೆ. ಕರ್ನಾಟಕದ ಅಗ್ನಿಶಾಮಕ ದಳವು ದೇಶದಲ್ಲೇ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದ ಸಚಿವರು, ಸಿಬ್ಬಂದಿಗಳ ಶಿಸ್ತು ಮತ್ತು ವಿಪತ್ತಿನ ಸಮಯದಲ್ಲಿ ಅವರು ನೀಡುವ ಸೇವೆಯನ್ನು ಸಮಾಜ ಗುರುತಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


