ತುಮಕೂರು: ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು. ಸಂಚಾರಿ ನಿಯಮಗಳನ್ನು ಪಾಲಿಸದಿರುವುದು ಅವಾಂತರಗಳಿಗೆ ಆಹ್ವಾನ ನೀಡಿದಂತೆ. ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿರುವುದು, ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದು ಒಂದು ಫ್ಯಾಷನ್ ಆಗಿದೆ. ಇದರಿಂದ ರಸ್ತೆ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಜಿಲ್ಲೆಯಲ್ಲಿ 2024ರ ಜನವರಿಯಿಂದ ಡಿಸೆಂಬರ್ವರೆಗೆ 1,836 ಅಪಘಾತಗಳು ಸಂಭವಿಸಿರುವ ಬಗ್ಗೆ ವರದಿಯಾಗಿರುವುದು ಆತಂಕದ ವಿಷಯ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸುವುದರಿಂದ ಸಂಭವಿಸಬಹುದಾದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು.
ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ:
ವಾಹನ ಚಾಲಕರು ಅಂಕು–ಡೊಂಕು ರಸ್ತೆ, ತಿರುವಿನಲ್ಲಿ ಓವರ್ ಟೇಕ್ ಮಾಡಬಾರದು. ಮುಂದಿರುವ ವಾಹನಕ್ಕೆ ಅತಿ ಹತ್ತಿರವಾಗಿ ವಾಹನ ಚಲಾಯಿಸಬಾರದು. ವಾಹನ ಚಾಲನೆಯಲ್ಲಿ ಅನಾವಶ್ಯಕ ಪೈಪೋಟಿ ಬೇಡ. ನಿದ್ದೆಯ ಸಮಯವಾದ್ದರಿಂದ ಬೆಳಗಿನ ಜಾವ 2 ರಿಂದ 5 ಗಂಟೆಯ ನಡುವೆ ವಾಹನ ಚಲಾಯಿಸದಿದ್ದರೆ ಉತ್ತಮ.
ಎದುರಿನ ವಾಹನ ಚಾಲಕನ ಕಣ್ಣು ಕುಕ್ಕುವಂತೆ ತಮ್ಮ ವಾಹನದ ಹೆಡ್ ಲೈಟ್ ಉರಿಸಬಾರದು. ವಾಹನ ಚಲಾಯಿಸುವಾಗ ಏಕಾಗ್ರತೆ ಕಳೆದುಕೊಳ್ಳಬಾರದು. ಶಾಲಾ–ಕಾಲೇಜುಗಳಿರುವಲ್ಲಿ ಹಾರ್ನ್ ಮಾಡುವುದನ್ನು ತಪ್ಪಿಸಬೇಕು. ವಾಹನಕ್ಕೆ ಕರ್ಕಶ ದನಿಯುಳ್ಳ ಹಾರ್ನ್ ಅಳವಡಿಸಬಾರದು. ವಾಹನ ಚಾಲನೆ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡಬಾರದು. ಧೂಮಪಾನ ಮಾಡಬಾರದು.
ವಾಹನ ಚಾಲಕರಿಗೆ ಸೂಚನೆ:
ಚಲಾಯಿಸುವ ಮುನ್ನ ವಾಹನ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ವಾಹನ ಚಾಲಕರು ಮೂರು ತಿಂಗಳಿಗೊಮ್ಮೆಯಾದರೂ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರಸ್ತೆ ದಾಟುವ ವೃದ್ಧರು, ಮಕ್ಕಳಿಗೆ ಅವಕಾಶ ಮಾಡಿಕೊಡುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದಾಗಿದೆ.
ರಸ್ತೆ ಅಪಘಾತ ತಪ್ಪಿಸಲು ಸಾರಿಗೆ ಇಲಾಖೆಯಿಂದ ಕ್ರಮ:
ರಸ್ತೆ ಅಪಘಾತಗಳನ್ನು ತಪ್ಪಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪ್ರತಿ ವರ್ಷ ಜನವರಿ ಮಾಹೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಶಾಲಾ–ಕಾಲೇಜುಗಳಲ್ಲಿಯೂ ರಸ್ತೆ ಸುರಕ್ಷತೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಸೇರಿದಂತೆ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ 425 ಚಾಲನಾ ಪರವಾನಗಿಯನ್ನು ಅಮಾನತು ಮಾಡಲಾಗಿದೆ.
ಅಧಿಕ ಭಾರ ಹೊತ್ತು ಸಾಗುವಂತಹ ಸರಕು ಸಾಗಾಣಿಕೆ ವಾಹನಗಳಲ್ಲಿ ನಿಗದಿತ ಭಾರಮಿತಿಗಿಂತ ಅಧಿಕವಾಗಿದ್ದಲ್ಲಿ ಪ್ರಕರಣ ದಾಖಲಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ. ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರು/ಪ್ರಾಣಿಗಳನ್ನು ತುಂಬಿಕೊಂಡು ಸಂಚರಿಸುತ್ತಿದ್ದಲ್ಲಿ ಅಂತಹ ವಾಹನಗಳ ನೋಂದಣಿಯನ್ನು ರದ್ದುಪಡಿಸಲಾಗುವುದು. 18 ವರ್ಷದೊಳಗಿರುವವರು ವಾಹನ ಚಲಾಯಿಸಿದಲ್ಲಿ ಅವರ ಪೋಷಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸದಲ್ಲಿ ದಂಡ ವಿಧಿಸಿ ಚಾಲನಾ ಪರವಾನಗಿಯನ್ನು ಅಮಾನತ್ತುಗೊಳಿಸಲಾಗುವುದು.
ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಜೈಲು ಶಿಕ್ಷೆ:
ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದರೆ 6 ತಿಂಗಳು ಜೈಲು ಶಿಕ್ಷೆ ಅಥವಾ 2,000 ರೂ.ಗಳ ದಂಡ ಅಥವಾ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಲು ಅವಕಾಶವಿದೆ. ಚಾಲನಾ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಿದವರಿಗೆ ಸ್ಥಳದಲ್ಲೇ ಚಾಲನಾ ಪರವಾನಗಿ ಅಮಾನತ್ತು ಮಾಡಲಾಗುವುದು.
ಮಾಲೀಕರು ಮತ್ತು ಚಾಲಕರು ತಮ್ಮ ವಾಹನ ದಾಖಲಾತಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ವಾಹನ ಸಂಚಾರಕ್ಕೂ ಮುನ್ನ ವಾಹನದ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮೋಟಾರ್ ವಾಹನ ಕಾಯ್ದೆ ಪ್ರಕಾರ ದಂಡ ವಿಧಿಸಲಾಗುವುದು.
ಮಾಲೀಕರು ತಮ್ಮ ವಾಹನ ಬಣ್ಣ ಬದಲಾವಣೆ ಹಾಗೂ ಇನ್ನಾವುದೇ ರೀತಿಯಲ್ಲಿ ಸಾರಿಗೆ ಇಲಾಖೆ ಅನುಮತಿಯಿಲ್ಲದೆ ಮಾರ್ಪಾಡು ಮಾಡಿಕೊಳ್ಳಬಾರದು. ವಾಹನದ ಮಾರ್ಪಾಡು ಮಾಡುವ ಅವಶ್ಯಕತೆಯಿದ್ದಲ್ಲಿ ಕಡ್ಡಾಯವಾಗಿ ಸಾರಿಗೆ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮೋಟಾರ್ ವಾಹನ ಕಾಯ್ದೆ ಪ್ರಕಾರ ದಂಡ ವಿಧಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ವಾಹನಗಳನ್ನು ಅನಾವಶ್ಯಕವಾಗಿ ನಿಲುಗಡೆ ಮಾಡಬಾರದು. ವಾಹನ ತೊಂದರೆಗೊಳಗಾದಲ್ಲಿ ನಿಲುಗಡೆ ಮಾಡುವ ಅವಶ್ಯಕತೆ ಬಂದಾಗ ಎಮರ್ಜೆನ್ಸಿ ಪಾರ್ಕಿಂಗ್ ರಿಫ್ಲೆಕ್ಟರ್ ಸ್ಟಾಂಡ್ ಅನ್ನು ಕಾಣುವಂತೆ ನಿಲುಗಡೆ ಮಾಡಬೇಕು.
ಅಪಘಾತಕ್ಕೀಡಾದವರಿಗೆ ಪ್ರಥಮ ಚಿಕಿತ್ಸೆ ಅಗತ್ಯ:
ರಸ್ತೆ ಅಪಘಾತವಾದಾಗ ಅಪಘಾತಕ್ಕೀಡಾದವರಿಗೆ ಪ್ರಥಮ ಚಿಕಿತ್ಸೆ ನೀಡಬೇಕು. ಆದಷ್ಟು ಬೇಗ ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು. ಅಪಘಾತವುಂಟು ಮಾಡಿ ಗಾಯಾಳುಗೆ ಪ್ರಥಮ ಚಿಕಿತ್ಸೆ ನೀಡದೆ ತಪ್ಪಿಸಿಕೊಂಡು ಹೋದರೆ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು. ಅಪಘಾತವುಂಟು ಮಾಡಿ ನಿಲ್ಲಿಸದೆ ಹೋಗುವ ವಾಹನದ ನೋಂದಣಿ ಸಂಖ್ಯೆಯನ್ನು ಸಹಾಯವಾಣಿ ಸಂಖ್ಯೆ 100ಕ್ಕೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.
41 ನಿರಂತರ ಅಪಘಾತ ತಾಣಗಳು(ಬ್ಲಾಕ್ ಸ್ಪಾಟ್ಸ್):
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರಂತರವಾಗಿ ಅಪಘಾತ ಸಂಭವಿಸುವ 41 ಸ್ಥಳಗಳನ್ನು ಗುರುತಿಸಲಾಗಿದ್ದು, ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಪ್ರತೀ ತಿಂಗಳು ಸಭೆ ನಡೆಸಲಾಗುತ್ತಿದೆ.
ಪೊಲೀಸ್ ಇಲಾಖೆಯಿಂದ ಜಿಲ್ಲೆಯಲ್ಲಿ ತುಮಕೂರು ಗ್ರಾಮಾಂತರ ವ್ಯಾಪ್ತಿಯ ಜೈನ್ ಪಬ್ಲಿಕ್ ಶಾಲೆ– ಊರುಕೆರೆ ಹಾಗೂ ಹೆಗ್ಗೆರೆ ಆರ್ಚ್–ಡೆಂಟಲ್ ಕಾಲೇಜು; ಕೋರಾ ವ್ಯಾಪ್ತಿ ನೆಲಹಾಳ್ ವೃತ್ತ ಹಾಗೂ ಅಜ್ಜಗೊಂಡನಹಳ್ಳಿ ವೃತ್ತ; ಕ್ಯಾತ್ಸಂದ್ರ ವ್ಯಾಪ್ತಿ ಚಿಕ್ಕಹಳ್ಳಿ, ಹಿರೇಹಳ್ಳಿ, ಪಂಡಿತನಹಳ್ಳಿಗೇಟ್, ಮಂಚಲಕುಪ್ಪೆ ಸರ್ಕಲ್; ಕುಣಿಗಲ್ ವ್ಯಾಪ್ತಿ ಅಂಚೆಪಾಳ್ಯ, ಬೇಗೂರು ಸೇತುವೆ, ಹೇರೂರು ಸೇತುವೆ, ಉರ್ಕೇನಹಳ್ಳಿ, ಕುರುಡಿಹಳ್ಳಿ; ಅಮೃತೂರು ವ್ಯಾಪ್ತಿ ನಾಗೇಗೌಡನಪಾಳ್ಯ ಗೇಟ್, ತಿಪ್ಪೂರು ಗೇಟ್, ಮಾಗಡಿಪಾಳ್ಯ ಗೇಟ್, ಹೇಮಾವತಿ ಕ್ರಾಸ್, ಚಾಕೇನಹಳ್ಳಿಗೇಟ್; ತುರುವೇಕೆರೆ ವ್ಯಾಪ್ತಿ ಜೋಡುಗಟ್ಟೆ; ಶಿರಾ ವ್ಯಾಪ್ತಿ ಶಿವಾಜಿ ನಗರ ಹಾಗೂ ಮಾನಂಗಿತಾಂಡ ಗೇಟ್; ಕಳ್ಳಂಬೆಳ್ಳ ವ್ಯಾಪ್ತಿ ಜೋಗಿಹಳ್ಳಿ, ದೊಡ್ಡಾಲದಮರ, ಬಾಳೇನಹಳ್ಳಿ ಗೇಟ್; ತಾವರೆಕೆರೆ ವ್ಯಾಪ್ತಿ ದ್ವಾರಾಳು ಸೇತುವೆ ಹಾಗೂ ತಾವರೆಕೆರೆ; ತಿಪಟೂರು ಪಟ್ಟಣ ವ್ಯಾಪ್ತಿ ಬಂಡಿಹಳ್ಳಿಗೇಟ್-ರೇಣುಕಾ ಡಾಬ; ಹುಲಿಯೂರು ದುರ್ಗ ವ್ಯಾಪ್ತಿ ಡಿ.ಹೊಸಹಳ್ಳಿ–ಡಿ.ಹೊಸಹಳ್ಳಿ ಗೊಲ್ಲರಹಟ್ಟಿ, ಕೊಡವತ್ತಿ ಜಂಕ್ಷನ್, ಹಳೇವೂರು ಜಂಕ್ಷನ್, ಐಬಿ ಸರ್ಕಲ್; ಮಿಡಿಗೇಶಿ ವ್ಯಾಪ್ತಿ ಕೆರೆಗಳ ಪಾಳ್ಯ ಬಸ್ ನಿಲ್ದಾಣ ಸುತ್ತಮುತ್ತ ಹಾಗೂ ಹೊಸಕೆರೆ; ಪಾವಗಡ ವ್ಯಾಪ್ತಿ ರಾಜವಂತಿ ಕೆರೆ, ನಾಗಲಮಡಿಕೆ ಕ್ರಾಸ್, ಪಳವಳ್ಳಿ ಕೆರೆ; ಕೊರಟಗೆರೆ ವ್ಯಾಪ್ತಿ ತುಂಬಾಡಿ, ಜಿ.ನಾಗೇನಹಳ್ಳಿ, ಜಂಪೇನಹಳ್ಳಿ ಕ್ರಾಸ್, ಜಟ್ಟಿ ಅಗ್ರಹಾರ, ಥರಟಿ ಸೇರಿದಂತೆ 41 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಇಲಾಖೆಯಿಂದ 54 ಕೋಟಿ ರೂ. ಶುಲ್ಕ ಸಂಗ್ರಹ:
ಸಾರಿಗೆ ಇಲಾಖೆಯಲ್ಲಿ 2024ರ ಜನವರಿ ಮಾಹೆಯಿಂದ ಡಿಸೆಂಬರ್ ವರೆಗೆ ವಾಹನಗಳ ನೋಂದಣಿಗಾಗಿ 4,86,59,028 ರೂ., ಅರ್ಹತಾ ಪತ್ರಕ್ಕಾಗಿ 84,57,101 ರೂ., ರಹದಾರಿ ಶುಲ್ಕ 48,83,306 ರೂ., ದಂಡ ಶುಲ್ಕವಾಗಿ 1,71,45,733 ರೂ., 5663 ಇಲಾಖಾ ಪ್ರಕರಣಗಳಿಂದ 2,38,07,893 ರೂ. ಸೇರಿ 54,09,53,061 ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ. ಪ್ರಸಾದ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4