ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೇಲ್ವರ್ಗಗಳಿಗೆ ನೀಡಲಾಗಿರುವ ಶೇ.10 ಮೀಸಲನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆ ಕೋರಿ ಡಿಎಂಕೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈ ಮೀಸಲು ಜಾತಿ ತಾರತಮ್ಯವನ್ನು ಕಾನೂನುಬದ್ಧಗೊಳಿಸುತ್ತದೆ ಎಂದು ವಾದಿಸಿದೆ.
ಶೇ.10 ಮೀಸಲಾತಿ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ, ಆದರೆ ಇದು ಮಂಡಲ್ ತೀರ್ಪು ಎಂದೇ ಜನಪ್ರಿಯತೆ ಪಡೆದುಕೊಂಡಿರುವ 1992ರ 9 ನ್ಯಾಯಾಧೀಶರ ಸಾಂವಿಧಾನಿಕ ಪೀಠ ನೀಡಿದ ಆದೇಶದ ಉಲ್ಲಂಘನೆಯಾಗಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಇಂದ್ರಾ ಸಾಹ್ನಿ ವರ್ಸಸ್ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸಂವಿಧಾನದ ಮೂಲ ರೂಪಕ್ಕೆ ಧಕ್ಕೆ ತರಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಶೇ.10ರಷ್ಟು ಮೀಸಲನ್ನು ಮಾನ್ಯ ಮಾಡುವ ಮೂಲಕ ಇದನ್ನು ಉಲ್ಲಂಘಿಸಲಾಗಿದೆ. ಆರ್ಥಿಕ ಅಂಶವನ್ನು ಮಾನದಂಡವಾಗಿಟ್ಟುಕೊಂಡು ಮೀಸಲು ನೀಡುವುದು ಸಂವಿಧಾನಕ್ಕೆ ವಿರೋಧವಾಗಿದೆ ಎಂದು ಡಿಎಂಕೆ ತಿಳಿಸಿದೆ.
ಈ ಹಿಂದೆ ಕಾಂಗ್ರೆಸ್ ಕೂಡ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೇಲ್ವರ್ಗದ ಆರ್ಥಿಕ ಹಿಂದುಳಿದವರ ಮೀಸಲು, ಆರ್ಥಿಕತೆ ಹಾಗೂ ಗಡಿಗಳ ಪರಿಸ್ಥಿತಿ ಮೊದಲಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸಿತ್ತು. 17 ದಿನ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಚಾರಗಳನ್ನು ಪ್ರಮುಖವಾಗಿ ಚರ್ಚಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದರು. ನಾಳೆಯಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy