ತುಮಕೂರು: ಅಲೆಮಾರಿ ಕುಟುಂಬಗಳಿಗೆ ನಿವೇಶನಗಳಿಗಾಗಿ ಮಂಜೂರು ಮಾಡಲಾದ ಭೂಮಿಯ ಅಭಿವೃದ್ಧಿ ವೇಳೆ ಬೆಲೆ ಬಾಳುವ ಅಲಂಕಾರಿಕ ಶಿಲೆ, ಗ್ರಾನೈಟ್ ಕಲ್ಲು ದೊರಕಿದ್ದು, ಆದರೆ ಈ ಬಗ್ಗೆ PRED ಇಲಾಖೆಯವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಈ ವಿಚಾರ ತಿಳಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಕಲ್ಯಾಣಪುರ ಗ್ರಾಮದ ಸರ್ವೆ ನಂಬರ್ 83 ರಲ್ಲಿ ನಾಗವಲ್ಲಿ ಗ್ರಾಮದ ಅಲೆಮಾರಿ ಕುಟುಂಬಗಳಿಗೆ ನಿವೇಶನಗಳಿಗಾಗಿ ಎರಡು ಎಕರೆ ಭೂಮಿಯನ್ನು ಈ ಹಿಂದೆ ಜಿಲ್ಲಾಡಳಿತ ಮಂಜೂರು ಮಾಡಿತ್ತು. ಅದರಂತೆ ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ದಿ ನಿಗಮ ಮತ್ತು ಅಲೆಮಾರಿ ಕೋಶಗಳ ಸಹಯೋಗ ಈ ಭೂಮಿಯನ್ನು ಅಭಿವೃದ್ದಿಪಡಿಸಿ ನಿವೇಶನ ಹಂಚಿಕೆ ಮಾಡಲು ಹಣವೂ ಸಹ ಬಿಡುಗಡೆ ಮಾಡಲಾಗಿತ್ತು. ಈ ಮಧ್ಯೆ ಈ ಭೂಮಿ ಅಭಿವೃದ್ದಿ ಕಾರ್ಯ ಮಾಡುವ ವೇಳೆ ಈ ಭೂಮಿಯಲ್ಲಿ ಅಪಾರ ಪ್ರಮಾಣದ ಬೆಲೆ ಬಾಳುವ ಬೃಹದಾಕಾರದ ಅಲಂಕಾರಿಕ ಶಿಲೆ, ಗ್ರಾನೈಟ್ ಕಲ್ಲು ದೊರಕಿದೆ. ಈ ವಿಚಾರವನ್ನು PRED ಇಲಾಖೆಯವರು ಸಂಬಂದಿಸಿದ ತಾಲ್ಲೂಕು, ಜಿಲ್ಲಾ ಆಡಳಿತಕ್ಕೆ ಮತ್ತು ಪ್ರಮುಖವಾಗಿ ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಗಮನಕ್ಕೆ ತರದಿರುವುದು ತುಂಬಾ ವಿಷಾಧನೀಯ ಎಂದು ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಇಲಾಖೆಯ ವೈಫಲ್ಯವಾಗಿದ್ದು, ಈ ಬಗ್ಗೆ ತುರ್ತಾಗಿ ಜಿಲ್ಲಾ ಮರಳು ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು ಮತ್ತು ಸದಸ್ಯ ಕಾರ್ಯದರ್ಶಿಗಳಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಅಪಾರ ಬೆಲೆ ಬಾಳುವ ಈ ಕಲ್ಲುಗಳನ್ನು ನಿಯಮಾನುಸಾರ ವಿಲೇವಾರಿ ಮಾಡುವುದರ ಜೊತೆಗೆ ಇದರಿಂದ ಬರುವ ರಾಜಧನವನ್ನು ಸರ್ಕಾರಕ್ಕೆ ಸಂದಾಯ ಮಾಡಬೇಕು ಎಂದು ತಾಲ್ಲೂಕು ಮರಳು ಸಮಿತಿ ಹಂದ್ರಾಳ್ ನಾಗಭೂಷಣ್, ಮಧುಗಿರಿ ತಾಲ್ಲೂಕು ಭೂಮಿ ವಸತಿ ಹೋರಾಟ ಸಮಿತಿಯ ಮಲ್ಲಿಕಾರ್ಜುನಯ್ಯ, ಮಾಚನಹಳ್ಳಿ ಮುನಿರಾಜು, ಗೊಲನ ನಟರಾಜು ಜಿ.ಎಲ್., ಮಂಜುನಾಥ್, ವಕೀಲರಾದ ಶಿವಕುಮಾರ್ ಮಾಸ್ಟರ್ ಮನೆ, ಗಣೇಶ್ ಮಾರನಹಳ್ಳಿ ಕುಣಿಗಲ್ ನರಸಿಂಹಮೂರ್ತಿ, ಕಾರ್ತಿಕ್,ಶ್ರೀನಿವಾಸ್ ಇತರರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ವರದಿ: ಶಿವಕುಮಾರ್ ಮೇಷ್ಟ್ರು ಮನೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1