ತುಮಕೂರು: ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ “3 ದಿನಗಳ ಸಮೂಹ ಚಿತ್ರಕಲಾ ಪ್ರದರ್ಶನವನ್ನು 74ನೇ ಗಣರಾಜ್ಯೋತ್ಸವದ’ ಅಂಗವಾಗಿ ಏರ್ಪಡಿಸಲಾಗಿತ್ತು.
ಚಿತ್ರಕಲಾ ಪ್ರದರ್ಶನವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಗಣ್ಯರು ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಆರ್.ಲೀಲಾವತಿ, “ಚಿತ್ರಕಲಾ ಪದವಿ ಶಿಕ್ಷಣವೇ ಸಂಪೂರ್ಣ ಕೌಶಲ್ಯ ಭರಿತವಾಗಿದೆ. ಇಲ್ಲಿನ ಮಕ್ಕಳ ಚಿತ್ರಕಲಾ ಪ್ರತಿಭೆಯು ಇಂದಿನ ಕಲಾ ಪ್ರದರ್ಶನದಲ್ಲಿ ಅನಾವರಣಗೊಂಡಿದೆ. ಈ ಕಾಲೇಜು ನಮ್ಮದೇ ಆಗಿದ್ದು, ನಮ್ಮ ಕಾಲೇಜಿನಲ್ಲಿ ಈ ರೀತಿ ಕಲಾ ಪ್ರದರ್ಶನ ಮಾಡಲು ನಮ್ಮ ಸಹಕಾರ ಬೆಂಬಲವನ್ನು ನೀಡಲು ನಾವು ಸದಾ ಬಯಸುತ್ತೇವೆ.” ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯರಾದ ವಿಶ್ವವಿದ್ಯಾನಿಲಯ ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಇದು ಸಹ ನಮ್ಮ ಕಾಲೇಜು ಎಂದು ನಾನು ಭಾವಿಸಿದ್ದೇನೆ. ನಿಮ್ಮಲ್ಲಿ ನಾನೂ ಒಬ್ಬನಾಗಿರುವೆ. ಚಿತ್ರಕಲಾ ಶಿಕ್ಷಣದ ಉಳಿವಿಗಾಗಿ ಈ ಕಾಲೇಜಿನ ಪ್ರಾಂಶುಪಾಲರು ನಿರಂತರ ಶ್ರಮಿಸುತ್ತಿದ್ದಾರೆ. ಅವರ ಶೈಕ್ಷಣಿಕ ಕಾಳಜಿಯಿಂದ ನನಗೆ ಅವರು ಅತ್ಯಂತ ಆತ್ಮೀಯರಾಗಿದ್ದಾರೆ. ಇಂತಹ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ” ಎಂದು ಪ್ರದರ್ಶನದ ಕುರಿತ ತಮ್ಮ ಸಂತಸ ವ್ಯಕ್ತಪಡಿಸಿದರು.
ಚಿತ್ರಕಲಾ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ನಮ್ಮತುಮಕೂರು ಮಾಧ್ಯಮದ ಪ್ರಧಾನ ಸಂಪಾದಕರಾದ ಜಿ.ಎಲ್.ನಟರಾಜು ಮಾತನಾಡಿ, ಈ ಕಾಲೇಜಿನಲ್ಲಿ ಕಲಿತ ನನಗೆ ಈ ಕಾಲೇಜಿನ ಬಗ್ಗೆ ಅಪಾರ ಗೌರವವಿದೆ. ಹಾಗಾಗಿ ಈ ಕಾಲೇಜನ್ನು ಮುಚ್ಚಲು ನಾನು ಬಿಡುವುದಿಲ್ಲ, ಇದನ್ನು ಉಳಿಸಿ ಬೆಳೆಸಲು ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಜಾ ಪ್ರಗತಿ ವರದಿಗಾರರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹರೀಶ್ ಅವರು ಮಾತನಾಡಿ, ತುಮಕೂರು, ಎಲ್ಲಾ ಕಲಾ ಪ್ರಕಾರಗಳಿಗೆ ತವರೂರಾಗಿದೆ. ಅಮರಶಿಲ್ಪಿ ಜಕಣಾಚಾರಿ ಜನಿಸಿದ ತುಮಕೂರು ಜಿಲ್ಲೆಯ ಕೈದಾಳ ಗ್ರಾಮ ಇದಕ್ಕೆ ಸಾಕ್ಷಿಯಾಗಿದೆ. ನಗರದಲ್ಲಿ ಚಿತ್ರಕಲಾ ಪ್ರತಿಭೆಗಳಿಗೂ ಸೂಕ್ತ ಪ್ರೋತ್ಸಾಹ ದೊರೆಯಲಿ ಎಂದರು.
ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ಮಾತನಾಡಿ, ಇಂದು ಕಲಿಕೆಯೊಂದಿಗೆ–ಗಳಿಕೆ ಮಾಡುವ ಯಾವ ಪದವಿಗಳಿಲ್ಲ, ಆದರೆ ನಮ್ಮ ಬಿ.ವಿ.ಎ. ಚಿತ್ರಕಲಾ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿಯೇ, ದುಡಿಯುವ ಸಾಮರ್ಥ್ಯ ಹೊಂದಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಹಣ ಸಂಪಾದಿಸುತ್ತ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. ಈ ಪದವಿ ಪಡೆದ ನಮ್ಮ ಕಾಲೇಜಿನ 33ಕ್ಕೂ ಹೆಚ್ಚಿನ ಚಿತ್ರಕಲಾ ಪದವೀದರರು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ಇದೇ ತಿಂಗಳು ಉದ್ಯೋಗ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಜೊತೆಗೆ ಈ ಪದವಿ ಪಡೆದವರಿಗೆ ವಿಫುಲ ಉದ್ಯೋಗಾವಕಾಶಗಳನ್ನು ಪಡೆಯುವಂತಹ ಕೋರ್ಸ್ ಇದಾಗಿದೆ. ” ಎಂದರು.
ಕಾಲೇಜಿನ ಹಿರಿಯ ಅತಿಥಿ ಉಪನ್ಯಾಸಕರಾದ ಎಂ.ಎನ್.ಸುಬ್ರಹ್ಮಣ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ರೀವಿದ್ಯಾ ಟಿ.ಎಸ್. ಪ್ರಾರ್ಥನೆ ಗೀತೆ ಹಾಡಿದರು. ಅತಿಥಿ ಉಪನ್ಯಾಸಕರಾದ ರೂಪಾರವರು ವಂದನಾರ್ಪಣೆ ಮಾಡಿದರು, ಅತಿಥಿ ಉಪನ್ಯಾಸಕರಾದ ಸತ್ಯನಾರಾಯಣ ಟಿ.ಎಸ್., ನೇತ್ರಮ್ಮರವರು ಕಲಾಪ್ರದರ್ಶನದ ಯಶಸ್ವಿಗೆ ಸಹಕರಿಸಿದರು.
ಕಾಲೇಜಿನ 18 ವಿದ್ಯಾರ್ಥಿಗಳು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ನಗರದ ವಿವಿಧ ಶಾಲಾ ಕಾಲೇಜಿನ ಮಕ್ಕಳು, ಪೋಷಕರು, ಶಿಕ್ಷಕರು ಸಾವಿರಾರು ಸಂಖ್ಯೆಯಲ್ಲಿ ಪ್ರದರ್ಶನಕ್ಕೆ ಸಾಕ್ಷಿಯಾಗಿ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚಿಗೆ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1