ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಐದು ದಿನ ಪೂರೈಸಿ, ಮುಂದುವರೆಯುತ್ತಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸ್ವಾತಂತ್ರ್ಯ ಉದ್ಯಾನದಲ್ಲಿ ಸ್ಥಳದ ಕೊರತೆಯ ಕಾರಣಕ್ಕೆ ಗಾಂಧಿ ನಗರದ ರಸ್ತೆಗೆ ಬಂದು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಆರಂಭಿಸಿದ್ದಾರೆ.
ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ.
ಅಂಗನವಾಡಿ ಕಾರ್ಯಕರ್ತೆಯರ ಧರಣಿ ವಿಚಾರವಾಗಿ ಸರಣಿ ಟ್ವಿಟ್ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಮುಷ್ಕರ ನಿರತ ಅಂಗನವಾಡಿ ಕಾರ್ಯಕರ್ತರನ್ನು ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಅತ್ಯಂತ ಖಂಡನೀಯ.
ಸಿಎಂ ಬೊಮ್ಮಾಯಿ ಅವರು ತಕ್ಷಣ ಅಂಗನವಾಡಿ ಕಾರ್ಯಕರ್ತರನ್ನು ಕರೆದು ಅವರ ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಅಂಗನವಾಡಿ ಕಾರ್ಯಕರ್ತರು ಮಳೆ, ಚಳಿ, ಗಾಳಿ ಎನ್ನದೆ ಬೀದಿಯಲ್ಲಿ ಠಿಕಾಣಿ ಹೂಡಿ ಮುಷ್ಕರದಲ್ಲಿ ತೊಡಗಿದ್ದಾರೆ.
ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ನಂತರವೂ ರಾಜ್ಯ ಬಿಜೆಪಿ ಸರ್ಕಾರ
ಹಠಕ್ಕೆ ಬಿದ್ದು ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆಚೆಲ್ಲಾಟ ನಡೆಸುತ್ತಿರುವುದು ವಿಷಾದನೀಯ’ ಎಂದು
ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
‘ಸೇವೆ ಕಾಯಂ, ವೇತನ ಹೆಚ್ಚಳ ಮತ್ತು ಮತ್ತು ನಿವೃತ್ತಿ ಸೌಲಭ್ಯವೂ ಸೇರಿದಂತೆ ಹಲವು ಬೇಡಿಕೆಗಳನ್ನು ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಮುಂದಿಟ್ಟಿದ್ದಾರೆ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಮಾತುಕತೆಯ ಮೂಲಕ ಮುಷ್ಕರ ನಿರತರ ಬೇಡಿಕೆ ಈಡೇರಿಸಲು ಸಾಧ್ಯವಿತ್ತು. ಸರ್ಕಾರ ಉದ್ಧಟತನದಿಂದ ಸಂಘರ್ಷದ ಹಾದಿ ಆಯ್ದುಕೊಂಡಿದೆ’ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy