ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೆಪೆಡ್ ಮೂಲಕ ರಾಗಿ ಖರೀದಿ ಮಾಡಲು ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು ನಾಲ್ಕೈದು ದಿನಗಳಿಂದ ರಾಗಿ ಮಾರಾಟ ಮಾಡಲು ಬಂದಿದ್ದ ರೈತರು ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಯುವಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ತಾವು ತಂದಿದ್ದ ರಾಗಿ ತುಂಬಿದ ಟ್ರಾಕ್ಟರ್ ಗಳನ್ನು ರಸ್ತೆ ಬದಿಯ ಪಕ್ಕದಲ್ಲಿ ಸುಮಾರು ಎರಡರಿಂದ ಮೂರು ಕಿಲೋಮೀಟರ್ ದೂರದವರೆಗೆ ಸಾಲುಗಟ್ಟಿ ನಿಲ್ಲಿಸಲಾಗಿದೆ.
ಇನ್ನು ಇದೇ ವೇಳೆಯಲ್ಲಿ ತಾಲೂಕು ಅಧ್ಯಕ್ಷರಾದ ರೈತ ಮುಖಂಡ ನಾಗೇಂದ್ರ ಅವರು ಮಾತನಾಡಿ, ಕೇವಲ ಮೂರು ರಾಗಿ ಖರೀದಿ ಕೇಂದ್ರಗಳಿ ಇಲ್ಲಿದ್ದು, ಇಲ್ಲಿ ಖರೀದಿ ಆಮೆ ಗತಿಯಲ್ಲಿ ಸಾಗುತ್ತಿದೆ. ತಾಲೂಕಿನಾದ್ಯಂತ ಹಳ್ಳಿಗಳಿಂದ ಬಂದಂತಹ ರೈತರುಗಳು ಬೇಸತ್ತು ಹೋಗಿದ್ದಾರೆ. ಒಟ್ಟಾರೆ ಈ ತಾಲೂಕಿನಲ್ಲಿ ಸುಮಾರು 13,602 ರೈತರು ನೋಂದಣಿ ಮಾಡಿಸಿದ್ದು, ಇಲ್ಲಿಯವರೆಗೆ ಕೇವಲ 980 ರೈತರಿಂದ ರಾಗಿ ಖರೀದಿ ಮಾಡಲಾಗಿದೆ ,ಏನೇ ಇರಲಿ ಆಹಾರ ಇಲಾಖೆಗೆ ಯಾವುದೇ ಮಂತ್ರಿ ಇಲ್ಲದಿರುವುದು ಈ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ, ಜೊತೆಗೆ ಎಪಿಎಂಸಿಯಾಗಲಿ, ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಯಾಗಲಿ ರೈತರಿಗೆ ಸ್ಪಂದಿಸುತ್ತಿಲ್ಲ, ಇನ್ನು ನಾಲ್ಕೈದು ದಿನದಿಂದ ಪ್ರತಿನಿತ್ಯ ಒಬ್ಬ ರೈತರಿಗೆ ಊಟ, ಟ್ರ್ಯಾಕ್ಟರ್, ಬಾಡಿಗೆ, ಅಂತ ಹೇಳಿ ಸುಮಾರು 2,000 ಖರ್ಚು ಬರುತ್ತಿದ್ದು, ನಾಲ್ಕೈದು ದಿನಗಳಿಂದ ನಮ್ಮ ರೈತರುಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ರಾಗಿ ಮಾರಾಟ ಮಾಡುವ ಹಾಗಾಗಿದೆ ಎಂದರು,
ಇದೇ ವೇಳೆ ತಾಳಕೆರೆ ಗ್ರಾಮದ ರೈತ ಜವರೇಗೌಡ ಮಾತನಾಡಿ, ನಾವು ರಾಗಿ ಮಾರಾಟ ಮಾಡಲು ಬಂದು ಸುಮಾರು 6 ದಿವಸಗಳು ಕಳೆದಿವೆ, ಇನ್ನು ನಾವು ಬೆಳೆದಂತಹ ರಾಗಿಯನ್ನು ಮಾರಾಟ ಮಾಡಲು ನಮ್ಮಗಳ ಗ್ರಾಮದಿಂದ ಇಲ್ಲಿಯವರೆಗೆ 2,800 ಬಾಡಿಗೆ ಕೊಟ್ಟು ಟ್ರ್ಯಾಕ್ಟರ್ ಮೂಲಕ ರಾಗಿ ತುಂಬಿಕೊಂಡು ಬಂದಿದ್ದೇವೆ, ಇಲ್ಲಿ ನಾವುಗಳು ಬಂದು ಆರು ದಿವಸವಾಗಿದೆ. ಪ್ರತಿ ದಿನಕ್ಕೆ 500 ಟ್ರ್ಯಾಕ್ಟರ್ ಬಾಡಿಗೆ ಕೊಡಬೇಕು. ನಮ್ಮ ಊಟದ ಖರ್ಚು ನಿತ್ಯ 200 ರಿಂದ 300 ರೂ ಆಗಲಿದೆ ನಾವುಗಳು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ರಾಗಿ ಖರೀದಿಗೆ ಸಂಬಂಧಪಟ್ಟಂತೆ ಯಾವೊಬ್ಬ ಅಧಿಕಾರಿಯು ರಾಗಿ ಕೇಂದ್ರದಲ್ಲಿ ವೇಗವಾಗಿ ಖರೀದಿ ನಡೆಸುತ್ತಿಲ್ಲ. ಕೇವಲ ಮೂರು ಕೇಂದ್ರಗಳಿದ್ದು ಇನ್ನು 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಜೊತೆಗೆ ರೈತರು ನಾವು ತಂದಿದ್ದ ರಾಗಿ ಬಿಸಿಲಿನಲ್ಲೇ ಒಣಗುತ್ತಿದ್ದೇವೆ. ನಮ್ಮ ಕಷ್ಟಗಳನ್ನು ಆಲಿಸುವರು ಯಾರು ಸ್ವಾಮಿ? ಎಂದು ಪ್ರಶ್ನಿಸಿದರು.
ಇದಲ್ಲದೆ ಸರ್ಕಾರದಿಂದ ಕೊಡುವಂತ ಚೀಲದಲ್ಲಿ ನಾವು ತಂದಿದ್ದ ರಾಗಿಗಳನ್ನು ತುಂಬಿಸುತ್ತಾರೆ. ಅದರಲ್ಲಿ ಅರ್ಧ ಕೆ.ಜಿ. ಎಷ್ಟು ಹೆಚ್ಚುವರಿ ರಾಗಿ ಚೀಲದಿಂದ ಹೊರಗೆ ಹೋಗುತ್ತದೆ ,ಪ್ರತಿ ಚೀಲಕ್ಕೆ ಅರ್ಧದಿಂದ ಒಂದು ಕೆಜಿಯಷ್ಟು ರಾಗಿ ಹೊರಗೆ ಹೋದರೆ ನಮ್ಮ ಗತಿ ಏನು, ಸರ್ಕಾರದಿಂದ ಚೀಲ ಖರೀದಿಯಲ್ಲೋ ಅವ್ಯವಹಾರ ಮಾಡಿ ಗುಣಮಟ್ಟವಿಲ್ಲದ ಚೀಲಗಳಲ್ಲಿ ರಾಗಿ ತುಂಬಿಸಿ ರೈತರ ಹೊಟ್ಟೆಯ ಮೇಲೆ ಬರೆ ಹಾಕುತ್ತಿದ್ದಾರೆ ಸರಿಯಾದ ರೀತಿಯಲ್ಲಿ ಚೀಲ ದೊರಕಿಸಿ ಕೊಟ್ಟಿಲ್ಲ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ , ರೈತರಾದ ಜವರೇಗೌಡ.ಶಶಿಧರ್ ಟಿ.ಎಸ್ ಈಶ್ವರಯ್ಯ ಕಡೆಹಳ್ಳಿ .ನಾಗೇಶ್ ಕೆ.ಶಿವು.ಶ್ರೀನಿವಾಸ ಕೆ ಟಿ ಕಣ್ಣತೂರು.ಇನ್ನು ಅನೇಕ ರೈತರು ಸ್ಥಳದಲ್ಲಿ ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1