ತುರುವೇಕೆರೆ ಪಟ್ಟಣದ ವಿನೋಬ ನಗರದ ನಿವಾಸಿಯಾದ ಆಟೋ ಚಾಲಕ 40 ವರ್ಷದ ಖಲೀಲ್ ಬಿನ್ ಮೋಹಿಯುದ್ದೀನ್ ಸಾಬ್ ಎಂಬುವರು ಸುಮಾರು 20 ವರ್ಷಗಳಿಂದ ತುರುವೇಕೆರೆ ತಾಲೂಕಿನ ಮೂಲೆ ಮೂಲೆಗಳಲ್ಲಿ ಸಾವನ್ನಪ್ಪಿದ ಅನಾಥ ಶವಗಳಿಗೆ ಮುಕ್ತಿ ದೊರಕಿಸಿ ಅವುಗಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತಿದ್ದಾರೆ.
ಕಾಯಕವೇ ಕೈಲಾಸ ಎಂಬಂತೆ, ಎಲೆಮರೆ ಕಾಯಂತೆ, ತನ್ನ ಕೆಲಸವನ್ನು ಯಾರಿಗೂ ತೋರಿಸಿಕೊಳ್ಳದೆ, ಪ್ರಚಾರ ಪಡೆಯದೇ, ಖಲೀಲ್ ತನ್ನ ಕಾಯಕ ಮಾಡುತ್ತಿದ್ದಾರೆ.
ಯಾವುದೇ ಮತ ಭೇದವಿಲ್ಲದೆ ಅನಾಥ ಶವಗಳನ್ನು ತನ್ನ ಆಟೋ ಮೂಲಕ ಸಾಗಿಸುತ್ತಾರೆ. ಶವ ಕೊಳೆತ ಸ್ಥಿತಿಯಲ್ಲಿಇದ್ದರೂ ಯಾವುದೇ ಬೇಸರವಿಲ್ಲದೆ, ಅಳುಕು ಅಂಜಿಕೆ ಇಲ್ಲದೆ ಅದನ್ನು ತಾನೇ ಎತ್ತಿಕೊಂಡು ಬಂದು ಸಾಗಿಸುವ ಮೂಲಕ ಮಾನವೀಯತೆ ಮೆರೆಯುತ್ತಾರೆ.
ತುರುವೇಕೆರೆ ಪೊಲೀಸ್ ಇಲಾಖೆಗೆ ಖಲೀಲ್ ತಮ್ಮದೇ ಆದ ರೀತಿಯಲ್ಲಿ ಸಹಾಯವನ್ನು ಮಾಡುತ್ತಾ ಕೊಟ್ಟಷ್ಟು ಹಣವನ್ನು ತೆಗೆದುಕೊಂಡು ಕಡು ಬಡತನದಲ್ಲಿ ಜೀವನ ನಿರ್ವಹಣೆಯನ್ನು ಮಾಡಿಕೊಂಡು ಹಾಗೂ ಈ ಮಧ್ಯದಲ್ಲಿ ಆಟೋ ಚಾಲನೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಕಾಯಕವನ್ನು ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಹಲವಾರು ಸಂಘ-ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿದೆ.
ಸರ್ಕಾರ ಇಂತಹ ವ್ಯಕ್ತಿಗಳನ್ನು ಗುರುತಿಸಿ ಅವರ ಜೀವನಕ್ಕೆ ಭದ್ರತೆಯನ್ನು ನೀಡಿ ಅವರಿಗೆ ಸಹಾಯಮಾಡಿ, ಸಿಗಬೇಕಾದ ಸವಲತ್ತುಗಳನ್ನು ಹಾಗೂ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯಲ್ಲಿ ದೊರಕುವ ಆಟೋವನ್ನು ದೊರಕಿಸಿಕೊಡಲು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸಹಾಯ ಹಸ್ತ ನೀಡಬೇಕೆಂದು ಮಾಧ್ಯಮಗಳ ಮೂಲಕ ಸಾರ್ವಜನಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ .
ಸಮಾಜ ಸೇವೆಗಾಗಿ ತನ್ನ ಆಟೋವನ್ನು ಈ ವ್ಯಕ್ತಿ ಬಳಸಿದರೆ, ಅತ್ತ, ಪ್ರಯಾಣಿಕರುಗಳು ಇವರ ಆಟೋ ಹೆಣ ಸಾಗಿಸುವ ಆಟೋ ಎಂದು ತಿಳಿದುಕೊಂಡು ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರಂತೆ. ನಮ್ಮನಾಳುವ ಸರ್ಕಾರಗಳು ಹಾಗೂ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳು ನನಗೆ ಜೀವನ ನಡೆಸಲು ಸೂಕ್ತ ಭದ್ರತೆಯನ್ನು ನೀಡಬೇಕೆಂದು ಖಲೀಲ್ ಮನವಿ ಮಾಡಿಕೊಂಡರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA