ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಜಿರಾಫೆ ಮಾತ್ರ ಇದ್ದು, ಪಶ್ಚಿಮ ಬಂಗಾಳದ ಅಲಿಪುರದಿಂದ ಮತ್ತೊಂದು ಜಿರಾಫೆ ತರಿಸುವ ಪ್ರಯತ್ನ ನಡೆದಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ ಅವರು, ಚಿರತೆ ಮತ್ತು ಜಿಂಕೆಗಳ ಸಾವಿನ ಖುದ್ದು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಬನ್ನೇರುಘಟ್ಟದಲ್ಲಿರುವ ಜಿರಾಫೆಯನ್ನು ಮೈಸೂರು ಮೃಗಾಲಯದಿಂದ ತರಿಸಲಾಗಿದ್ದು, ಏಕ ಪ್ರಾಣಿ ಇರುವ ಮೃಗಾಲಯಗಳಲ್ಲಿ ಮತ್ತೊಂದು ಅದೇ ಜಾತಿಯ ಪ್ರಾಣಿ ತರಿಸಲು ಸರ್ಕಾರ ಎಲ್ಲ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಉತ್ತಮ ಮೃಗಾಲಯ ಇದೆ, ಸಫಾರಿ ಇದೆ. ಇಲ್ಲಿ ಆನೆ, ಚಿರತೆ, ಹುಲಿ, ಸಿಂಹ, ಕರಡಿ, ಜಿಂಕೆಗಳು ಸ್ವೇಚ್ಛೆಯಾಗಿ ವಿಹರಿಸುವುದನ್ನು ನೋಡಬಹುದಾಗಿದೆ. ಬೆಂಗಳೂರಿಗೆ ಸಮೀಪದಲ್ಲೇ ಇದ್ದು, ಹೆಚ್ಚಿನ ಜನರು ಆಗಮಿಸುವ ಕಾರಣ, ಮುಖ್ಯರಸ್ತೆಯಿಂದ ಪರ್ಯಾಯವಾಗಿ ಮತ್ತೊಂದು ಸಂಪರ್ಕ ರಸ್ತೆ ಕಲ್ಪಿಸುವ ಅಗತ್ಯವಿದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.