ತುಮಕೂರು: ಕಾಡು ಉಳಿಸಿ ನಾಡು ಬೆಳೆಸಿ ಅನ್ನೋ ಅರಣ್ಯ ಕಚೇರಿ ಸಮೀಪದಲ್ಲಿ 28 ಮರಗಳ ಮಾರಣಹೋಮವಾಗಿದೆ. ಸರ್ಕಾರಿ ಕಚೇರಿಗೆ ರಜೆ ಇರುವ ಭಾನುವಾರದ ಸಮಯವನ್ನೇ ಸದುಪಯೋಗ ಪಡಿಸಿಕೊಂಡ ದುಷ್ಕರ್ಮಿಯೊಬ್ಬ, ತೇಗದ ಮರಗಳನ್ನು ಕಡಿದಿದ್ದಾನೆ. ಸೆಕ್ಯೂರಿಟಿಗಾರ್ಡ್ ಪ್ರಶ್ನಿಸುತ್ತಿದ್ದಂತೆ ಮರ ಕಡಿದ ಆರೋಪಿ ತಲೆ ಮರೆಸಿಕೊಂಡಿರೋ ಘಟನೆ ತುಮಕೂರಿನ ಹೇಮಾವತಿ ನಾಲಾ ಕಚೇರಿ ಆವರಣದಲ್ಲಿ ನಡೆದಿದೆ.
ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿರುವ ಹೇಮಾವತಿ ಕಚೇರಿಯ ಆವರಣದಲ್ಲಿನ 28 ತೇಗದ ಮರಗಳನ್ನು ಕಟಾವು ಮಾಡಲಾಗಿದೆ. ಭಾನುವಾರ ಕಚೇರಿಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ 28 ಮರಗಳನ್ನು ಕಡಿಯಲಾಗಿದೆ. ಜಲೀಲ್ ಎಂಬ ವ್ಯಕ್ತಿ ಮರ ಕಡಿದಿದ್ದಾನೆ ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ ನಾಲ್ಕಾರು ಆಳುಗಳು ಹಾಗೂ ಲಾರಿಯೊಂದಿಗೆ ಬಂದ ಜಲೀಲ್ ಎಂಬ ವ್ಯಕ್ತಿ ಮರ ಕಡಿಯಲು ಪ್ರಾರಂಭಿಸಿದ್ದಾನೆ. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಮರ ಕಡಿಯುವುದನ್ನು ತಡೆದಿದ್ದಾನೆ. ಕೂಡಲೇ ಜಲೀಲ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹೇಮಾವತಿ ಕಚೇರಿ ಆವರಣದಲ್ಲಿದ್ದ 30 ತೇಗದ ಮರಗಳನ್ನು ಕಡಿಯುವಂತೆ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳು ಟೆಂಡರ್ ಕರೆಯಲು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಈ ವಿಚಾರ ತಿಳಿದ ಜಲೀಲ್ ಟೆಂಡರ್ ಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳುವ ಮೊದಲೇ ಬಂದು ಮರಗಳನ್ನು ಕಡಿದಿದ್ದಾನೆ.
ಹೇಮಾವತಿ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಪ್ರಶ್ನಿಸಿದ ಬಳಿಕ ಜಲೀಲ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇತ್ತ ಅಧಿಕಾರಿಗಳು ಜಲೀಲ್ ಕಡಿದ ಮರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಜಲೀಲ್ ವಿರುದ್ಧ ಎಫ್.ಐಆರ್ ಕೂಡ ದಾಖಲಿಸಿದ್ದಾರೆ. ಸರಿಸುಮಾರು 5 ಲಕ್ಷ ಮೌಲ್ಯದ ಮರಗಳು ಇದಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದಲ್ಲೇ ಮರ ಕಡಿಯಲಾಗಿದೆ ಎಂಬ ಅನುಮಾನ ಶುರುವಾಗಿದೆ.