ಬರದ ಜತೆಗೆ, ವಿದ್ಯುತ್ ಬಿಕ್ಕಟ್ಟು, ಕಾವೇರಿ ಸಂಕಷ್ಟದ ವಿಷಯದಲ್ಲಿ ನಿಮ್ಮ ಸರ್ಕಾರ ಅಪರಿಮಿತ ಅಸಡ್ಡೆಯನ್ನು ಅರಿಯದಷ್ಟು ಮುಗ್ಧನೇ ನಾನು? ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಜತೆ ಹೆಚ್. ಡಿ. ದೇವೇಗೌಡರು ಮತ್ತವರ ಕುಟುಂಬಕ್ಕೆ ಆತ್ಮೀಯತೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯದ ಹಿತಕ್ಕಾಗಿ ನಾವು ಪ್ರಧಾನಿಯವರ ಮುಂದೆಯೂ ಧ್ವನಿ ಎತ್ತುತ್ತೇವೆ, ಅದು ನಮ್ಮ ಬದ್ಧತೆ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ.
ರಾಜ್ಯದ 236 ತಾಲೂಕುಗಳಲ್ಲಿ 216 ಬರಪೀಡಿತ ಎಂದು ಲೆಕ್ಕ ಕೊಟ್ಟಿದ್ದೀರಿ. 33, 710 ಕೋಟಿ ರೂ. ಮೌಲ್ಯದ ಬೆಳೆಹಾನಿ ಆಗಿದ್ದು, ಕೇಂದ್ರಕ್ಕೆ 17, 901 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದೀರಿ, ಸರಿ, ಜತೆಗೆ 343ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದೂ ತಿಳಿಸಿದ್ದೀರಿ.
ಅದನ್ನು ಯಾರಿಗೆ ಹಂಚಿದ್ದೀರಿ ಎಂದುಎಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಬರ, ಪ್ರವಾಹಕ್ಕೆ ಯಾವ ರೀತಿ ಪರಿಹಾರ ಕೊಡುತ್ತದೆ ಎನ್ನುವ ಸಾಮಾನ್ಯ ತಿಳಿವಳಿಕೆಯೂ ಇಲ್ಲವೇ ಎಂದಿದ್ದಾರೆ.
ರೈತ ಸಾಂತ್ವನ ಯಾತ್ರೆಯನ್ನು ಸ್ವಾಗತ ಮಾಡಿರುವ ನಿಮ್ಮ ‘ದೊಡ್ಡ’ ಗುಣವನ್ನು ಮನಸಾರೆ ಕೊಂಡಾಡುತ್ತೇನೆ ಎಂದು ಜೆಡಿಎಸ್ ಯಾತ್ರೆಯ ವ್ಯಂಗ್ಯವಾಡಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಸಲ್ಲಿಸಲಿರುವ ಬರ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದೀರಿ, ಬಹಳ ಸಂತೋಷ, ರೈತ ಸಾಂತ್ವನ ಯಾತ್ರೆಯ ಅನುಭವವನ್ನು ಕೇಂದ್ರದ ಜತೆಗೂ ಹಂಚಿಕೊಳ್ಳುತ್ತೇವೆ.
ನಿಮಗೆ ಸಂಶಯ ಬೇಡ. ರಾಜ್ಯದ ಅಗತ್ಯಗಳಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತಿದೆ? ಅದಕ್ಕೆ ನಿಮ್ಮ ನೇತೃತ್ವದ ಸರ್ಕಾರ ಎಷ್ಟು ಗಂಭೀರ ಪ್ರಯತ್ನ ಮಾಡಿದೆ, ಮಾಡುತ್ತಿದೆ ಎನ್ನುವುದು ನನಗೂ ತಿಳಿದಿದೆ ಎಂದು ಮಾತಲ್ಲೇ ತಿವಿದಿದ್ದಾರೆ.