ಮಧುಗಿರಿ. ರಾಜ್ಯದಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದ್ದರೂ ಕೂಡ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸದಿರುವುದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದರು.
ಪಟ್ಟಣದಲ್ಲಿರುವ ಬಿ. ಜೆ. ಪಿ. ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಕಾಲಕ್ಕೆ ಮಳೆ ಬಾರದೆ ಶೇ.90 ರಷ್ಟು ಬೆಳೆ ನಾಶವಾಗಿದೆ. ಜಾನುವಾರುಗಳಿಗೆ ಮೇವು ಸಿಗದ ಪರಿಸ್ಥಿತಿ ಇದ್ದರೂ ಕೂಡ ರಾಜ್ಯ ಸರ್ಕಾರ ಸರಿಯಾದ ಪರಿಹಾರ ಕೊಡುವ ಕೆಲಸ ಮಾಡುತ್ತಿಲ್ಲ. ಕೊಬ್ಬರಿಗೆ ಬೆಲೆ ಇಲ್ಲದೆ ತೆಂಗು ಬೆಳೆಗಾರ ಕಂಗಾಲಾಗಿದ್ದಾನೆ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಬರ ವೀಕ್ಷಣೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದು, ಕೇಂದ್ರ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡಲಿದೆ ಆದರೆ ರಾಜ್ಯ ಸರ್ಕಾರ ತಕ್ಷಣ ರೈತರ ಸಮಸ್ಯೆಗಳಿಗೆ ಧಾವಿಸಿ ಬೆಳೆ ಹಾನಿ ಪರಿಹಾರ ನೀಡಬೇಕು. ಈ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ ಎಂದರು.
ಕೊಳವೆ ಬಾವಿಗಳಲ್ಲಿ ಅಲ್ಪ ಸ್ವಲ್ಪ ನೀರಿದ್ದರೂ ವಿದ್ಯುತ್ ಸಮಸ್ಯೆಯಿಂದಾಗಿ ನೀರು ಹಾಯಿಸಲು ಆಗುತ್ತಿಲ್ಲ.3-4 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ನಮ್ಮ ಪಕ್ಷದ ಮುಖಂಡರ ತಂಡಗಳು ಇಡೀ ರಾಜ್ಯ ಪ್ರವಾಸ ಮಾಡುತ್ತಿದ್ದು, ಪ್ರವಾಸ ಮುಗಿದ ನಂತರ ರಾಜ್ಯ ಸರ್ಕಾರಕ್ಕೆ ಚುರುಕು ಮುಟ್ಟಿಸಲು ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.
ಶಾಸಕ ಬಿ. ಸುರೇಶ್ ಗೌಡ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ವಿ. ಪ. ಮಾಜಿ ಸದಸ್ಯ ಡಾ. ಎಂ. ಆರ್. ಹುಲಿ ನಾಯ್ಕರ್, ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಮಧುಗಿರಿ ಜಿಲ್ಲಾಧ್ಯಕ್ಷ ಬಿ. ಕೆ. ಮಂಜುನಾಥ್, ಮುಖಂಡರುಗಳಾದ ಸ್ಪೂರ್ತಿ ಚಿದಾನಂದ, ವಿನಯ್ ಬಿದರೆ, ಮುನಿಸ್ವಾಮಿ, ಮಂಡಲ ಅಧ್ಯಕ್ಷ ಪಿ. ಎಲ್. ನರಸಿಂಹಮೂರ್ತಿ, ಪವನ್ ಕುಮಾರ್, ಟಿ. ಆರ್. ಸದಾಶಿವಯ್ಯ, ಅನಿಲ್ ಕುಮಾರ್, ನಾಗೇಂದ್ರ, ಲತಾ ಪ್ರದೀಪ್, ಸೀತಾರಾಮ್, ನಾಗರಾಜಪ್ಪ ಮುಂತಾದವರು ಇದ್ದರು.
ವರದಿ: ಅಬಿದ್ ಮಧುಗಿರಿ