ಬೆಂಗಳೂರು: ಆ್ಯಸಿಡ್ ಎರಚುವುದಾಗಿ ಬಾಲಕಿಯನ್ನು ಬೆದರಿಸಿ ಮಾನಸಿಕ ಹಾಗೂ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದ ಅಪರಾಧಿ ಶಿವು (26) ಎಂಬಾತನಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನಗರದ 1ನೇ ತ್ವರಿತ ವಿಶೇಷ ನ್ಯಾಯಾಲಯ (ಎಫ್ ಟಿಎಸ್ ಸಿ) ಆದೇಶ ಹೊರಡಿಸಿದೆ.
ಹುಳಿಮಾವು ಠಾಣೆಯಲ್ಲಿ 2018ರಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶೆ ರೂಪಾ ಕೆ. ಎನ್. ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದಿಸಿದ್ದರು.
ಕೃಷ್ಣ ಬಡಾವಣೆಯ ನಿವಾಸಿ ಶಿವು, ಶಾಲೆಗೆ ಹೋಗುತ್ತಿದ್ದ 16 ವರ್ಷದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ. ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರೀತಿಸದಿದ್ದರೆ, ಆ್ಯಸಿಡ್ ಎರಚುವುದಾಗಿ ಬೆದರಿಸುತ್ತಿದ್ದ. ಈತನ ಕಿರುಕುಳ ಹೆಚ್ಚಾಗುತ್ತಿದ್ದಂತೆ ಬಾಲಕಿ, ಪೋಷಕರಿಗೆ ವಿಷಯ ತಿಳಿಸಿದ್ದಳು’ ಎಂದು ಪೊಲೀಸರು ಹೇಳಿದರು.
‘ಶಿವು ವಿರುದ್ಧ ಬಾಲಕಿಯ ಪೋಷಕರು ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ರೋ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಇನ್ಸ್ಪೆಕ್ಟರ್ ಚಂದ್ರಪ್ಪ, ಶಿವುನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ತಿಳಿಸಿದರು.
ವರದಿ: ಆಂಟೋನಿ ಬೇಗೂರು