ಚೆನ್ನೈ ಬಂದರಿನಲ್ಲಿ ನಿರ್ವಹಣೆ ವೇಳೆ ಹಡಗಿನಲ್ಲಿ ಸ್ಫೋಟ. ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಡಗಿನಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದ ಕಾರಣ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಒಡಿಶಾದಿಂದ ಆಗಮಿಸಿದ್ದ ತೈಲ ಟ್ಯಾಂಕರ್ ನಲ್ಲಿ ಈ ಅವಘಡ ಸಂಭವಿಸಿದೆ. ಅಕ್ಟೋಬರ್ 31ರಂದು ‘ಎಂಟಿ ಪೇಟ್ರಿಯಾಟ್’ ಹಡಗನ್ನು ದುರಸ್ತಿಗಾಗಿ ಚೆನ್ನೈ ಬಂದರಿಗೆ ತರಲಾಗಿತ್ತು. ಚೆನ್ನೈ ಬಂದರು ಕಾಂಪ್ಲೆಕ್ಸ್ ನ ಕೋಸ್ಟಲ್ ವರ್ಕ್ ಪ್ಲೇಸ್ ನಲ್ಲಿ ನಿಲ್ಲಿಸಲಾಗಿದ್ದ ಹಡಗಿನ ಬೋಲ್ಟ್ ತೆಗೆಯುವಾಗ ಸಮೀಪದ ಗ್ಯಾಸ್ ಪೈಪ್ಲೈನ್ ಒಡೆದಿದೆ.
ಕೆಲಸದಲ್ಲಿ ನಿರತರಾಗಿದ್ದ ಚೆನ್ನೈ ತಂಡೈಯಾರ್ ಪೇಟ್ ನಿವಾಸಿ ತಂಕರಾಜ್ ಮೃತರು. ಜೋಶುವಾ, ರಾಜೇಶ್ ಮತ್ತು ಪುಷ್ಪಾಲಿಂಗಮ್ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.