ದೀಪಾವಳಿಯನ್ನು ಸುರಕ್ಷಿತವಾಗಿ ಆಚರಿಸಲು ಬೆಂಗಳೂರಿಗರು ಕ್ರಮ ಕೈಗೊಂಡಿದ್ದರೂ ಭಾನುವಾರ ಮಧ್ಯರಾತ್ರಿಯವರೆಗೂ ನಗರದಲ್ಲಿ 20 ಪಟಾಕಿ ಅವಘಡ ಪ್ರಕರಣಗಳು ವರದಿಯಾಗಿವೆ. ಪಟಾಕಿ ಸಿಡಿತದಿಂದ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ವರದಿಯಾಗಿದೆ ಎಂದು ನಾರಾಯಣ ಹೆಲ್ತ್ ನ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ ಹೇಳಿದ್ದಾರೆ.
ಗಾಯಾಳುಗಳ ಪೈಕಿ ಶೇ. 90 ರಷ್ಟು ಮಂದಿ ನೋಡುಗರು ಅಥವಾ ಕೆಲಸದಿಂದ ಮನೆಗೆ ಮರಳುತ್ತಿದ್ದ ಅಮಾಯಕ ನಾಗರಿಕರಾಗಿದ್ದಾರೆ. ಇದು ಆತಂಕಕ್ಕೆ ದೊಡ್ಡ ಕಾರಣ ಎಂದು ಅವರು ತಿಳಿಸಿದ್ದಾರೆ. ನರಕ ಚತುರ್ದಶಿ ದಿನವಾದ ಭಾನುವಾರ ನಗರದ ವಿವಿಧೆಡೆ ಪಟಾಕಿ ಅವಘಡಗಳು ಸಂಭವಿಸಿದ್ದು, ನಾರಾಯಣ ನೇತ್ರಾಲಯದಲ್ಲಿ 16 ಪ್ರಕರಣಗಳು ವರದಿಯಾಗಿವೆ.
ಪ್ರಕರಣಗಳಲ್ಲಿ ಆರು ಮಂದಿಗೆ ಗಂಭೀರ ಗಾಯವಾಗಿದೆ. 10 ಮಂದಿಗೆ ಪಟಾಕಿ ಕಿಡಿಯಿಂದ ಸಣ್ಣ ಪುಟ್ಟ ಗಾಯಗಳಾಗಿವೆ. ಇವರಲ್ಲಿ ಶೇ 90ರಷ್ಟು ಮಂದಿ ಪಟಾಕಿ ಹಚ್ಚದಿದ್ದರೂ, ವೀಕ್ಷಿಸುವ ವೇಳೆ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆರು ಪ್ರಕರಣಗಳಲ್ಲಿ ಮೂರು ಮಂದಿ 19 ರಿಂದ 22 ವರ್ಷದೊಳಗಿನವರು. ಇಬ್ಬರು ಹತ್ತು ವರ್ಷದ ಮಕ್ಕಳಾಗಿದ್ದಾರೆ.