ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಬಗ್ಗೆ ಗಮನಹರಿಸಲು ಡಿಸಿಎಂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರುಗಳಿಗೆ ಕಿವಿಮಾತು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜವಾಹರಲಾಲ್ ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಾಮಾಜಿಕ, ಆರ್ಥಿಕ ಶಕ್ತಿಗೆ ಅಡಿಪಾಯ ಹಾಕಿದವರು. ಬೆಂಗಳೂರಿನಲ್ಲಿನ ಮಾನವ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೆಹರೂ ಅವರು ಆ ಕಾಲದಲ್ಲೇ ಎಚ್ ಎಎಲ್, ಹೆಚ್ ಎಂಟಿ, ಬಿಇಎಲ್, ಬಿಎಚ್ ಇಎಲ್, ಇಸ್ರೋ ಸೇರಿದಂತೆ ಅನೇಕ ಸಂಸ್ಥೆಗಳನ್ನು ಇಲ್ಲಿ ಸ್ಥಾಪಿಸಿದರು.
ಈ ಸಂಸ್ಥೆಗಳಿಂದ ನಮ್ಮ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯಕ್ಕೆ ಶಕ್ತಿ ಬಂದಿದೆ. ಅವರ ಕಾಲದಲ್ಲಿನ ಪಂಚವಾರ್ಷಿಕ ಯೋಜನೆ, ಅಂಬೇಡ್ಕರ್ ಅವರಿಗೆ ಕೊಟ್ಟ ಜವಾಬ್ದಾರಿ ಮಹತ್ವದ್ದಾಗಿದೆ. ಅವರ ಪ್ರತಿಯೊಂದು ನಿಲುವು ನೀತಿಗಳು ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿತ್ತು. ಅವರ ವಿದೇಶಾಂಗ ನೀತಿಯನ್ನು ವಿಶ್ವದ ಅನೇಕ ರಾಷ್ಟ್ರಗಳು ಅನುಸರಿಸಿದವು.ನೆಹರೂ ಅವರು ಅಲಹಬಾದ್ ಪಾಲಿಕೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಆಗಿನ ಕಾಲದಲ್ಲೇ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ನಾಯಕರಾಗಿ ಬೆಳೆದಿದ್ದಾರೆ. ಕೇವಲ ಎಂಎಲ್ ಎ, ಎಂಪಿ ಚುನಾವಣೆಗೆ, ನಿಗಮಮಂಡಳಿಗೆ ಅರ್ಜಿ ಹಾಕುವುದು ಹಾಗಿರಲಿ, ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಗ್ಗೆ ಗಮನಹರಿಸಿ. ನಾನು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಸಿದ್ದರಾಮಯ್ಯ ಅವರು 1977ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿದ್ದರು.
ಪಕ್ಷದ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲು ಯಾರಿಗೆ ಆಸಕ್ತಿ ಇದೆ ಅಂತಹವರು ಮುಂಚಿತವಾಗಿ ಹೆಸರು ಕೊಟ್ಟರೆ ಅವರಲ್ಲಿ ಒಒಬ್ಬರಿಗೆ ಐದು ನಿಮಿಷಗಳ ಕಾಲ ಮಾತನಾಡಲು ಅವಕಾಶ ಕಲ್ಪಿಸುತ್ತೇವೆ. ನ.19ರಂದು ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮವಿದ್ದು, ಅಲ್ಲಿ ನಿಮಗೆ ಅವಕಾಶ ನೀಡುತ್ತೇವೆ. ಅಂದು ಬೆಂಗಳೂರಿನ ನೂತನ ಐವರು ಜಿಲ್ಲಾಧ್ಯಕ್ಷರುಗಳ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ನಂತರ ತಮ್ಮ ಜಿಲ್ಲೆಗಳಲ್ಲಿ ಪ್ರತ್ಯೇಕ ಕಾರ್ಯಕ್ರಮ ಮಾಡುತ್ತಾರೆ. ಇನ್ನು ಮುಂದೆ ನಾವೆಲ್ಲರೂ ಜನರಮಧ್ಯೆ ಇದ್ದು ಕೆಲಸ ಮಾಡಬೇಕು. ನೀವೆಲ್ಲರೂ ಸೇರಿ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು, ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪುವಂತೆ ಮಾಡಬೇಕು. ನಾಳೆ ಇಬ್ಬರು ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂದರು.
ಕಾರ್ಯಕರ್ತರು ನೆಹರೂ ಆಚಾರ ವಿಚಾರ ಓದಿ ತಿಳಿದು ಕೊಳ್ಳಬೇಕು ಎಂದ ಡಿಕೆಶಿ, ಪಕ್ಷದ ಅಧ್ಯಕ್ಷನಾಗಿ ನಾನು ಕಾರ್ಯಕರ್ತರಿಗೆ ಒಂದು ವಿಚಾರ ಹೇಳುತ್ತೇನೆ. ಅವರ ಚಿಂತನೆ, ಆಚಾರ, ವಿಚಾರ ಅರಿತರೆ ನಾವು ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದು ಅರಿವಾಗುತ್ತದೆ. ಇಂದಿರಾ ಗಾಂಧಿ ಅವರು ಅಂಗನವಾಡಿ ಕಾರ್ಯಕ್ರಮ ಆರಂಭಿಸಿದ ಹಿಂದಿನ ದಿನ ಮಕ್ಕಳ ದಿನಚರಣೆಯಾಗಿತ್ತು. ಗ್ರಾಮೀಣ ಮಕ್ಕಳು ಪೌಷ್ಠಿಕ ಆಹಾರ ಸಿಗಲಿ ಎಂದು ದೇಶದಲ್ಲಿ ಅಂಗನವಾಡಿ ಕಾರ್ಯಕ್ರಮ ಆರಂಭಿಸಿದರು. ಅಂದಿನಿಂದ ಈ ಕಾರ್ಯಕ್ರಮ ದೊಡ್ಡದಾಗಿ ಬೆಳೆಯಿತು. ಅಂಗನವಾಡಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ.
ಮಕ್ಕಳ ವಿಚಾರದಲ್ಲಿ ನೆಹರೂ ಅವರ ದೂರದೃಷ್ಟಿ ಬಹಳ ದೊಡ್ಡದಾಗಿತ್ತು. ಮಕ್ಕಳನ್ನು ಸರಿಯಾಗಿ ಬೆಳೆಸಿದರೆ ಅವರೇ ದೇಶದ ಭವಿಷ್ಯದ ಆಸ್ತಿ ಎಂಬುದು ನೆಹರೂ ಅವರ ಚಿಂತನೆಯಾಗಿತ್ತು. ಇಂತಹ ಚಿಂತನೆ ನೆಹರೂ ಅವರಿಗೆ ಮಾತ್ರ ಸಾಧ್ಯ. ಅಲಹಬಾದ್ ನಲ್ಲಿ ನೆಹರೂ ಅವರು ತಮ್ಮ ಆಸ್ತಿಯನ್ನು ದೇಶಕ್ಕೆ ದಾನ ಮಾಡಿದರು. ದೆಹಲಿಯಲ್ಲಿ ನೆಹರೂ ಅವರಿದ್ದ ಮನೆಯನ್ನು ಪ್ರಧಾನಮಂತ್ರಿ ವಸ್ತುಸಂಗ್ರಹಾಲಯ ಮಾಡಿ ಅವರ ಹೆಸರು ಇರದಂತೆ ಮಾಡಿದ್ದಾರೆ. ನೆಹರೂ ಹಾಗೂ ಗಾಂಧಿ ಕುಟುಂಬದ ಹೆಸರನ್ನು ನಿರ್ಮೂಲನೆ ಮಾಡಲು ಅನೇಕ ಪ್ರಯತ್ನ ನಡೆಯುತ್ತಿವೆ. ಈ ದೇಶದ ಇತಿಹಾಸದಲ್ಲಿ ಗಾಂಧಿ ಕುಟುಂಬದ ಹೆಸರನ್ನು ನಿರ್ಮೂಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ರೀತಿ ನಮ್ಮ ಯೋಜನೆಗಳು ಆರ್ಥಿಕತೆಗೆ ಶಕ್ತಿ ತುಂಬಿವೆ. ಇದು ಕಾಂಗ್ರೆಸ್ ಪಕ್ಷದ ಚಿಂತನೆ.
ಗೃಹಲಕ್ಷ್ಮಿ ಯೋಜನೆಗೆ 1.08 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 1.04 ಲಕ್ಷ ಜನಕ್ಕೆ ಹಣ ಸಂದಾಯವಾಗುತ್ತಿದೆ. ಉಳಿದ ನಾಲ್ಕು ಲಕ್ಷ ಜನರ ಅರ್ಜಿಯಲ್ಲಿ ತಾಂತ್ರಿಕ ದೋಷಗಳಿಂದ ಹಣ ತಲುಪಿಲ್ಲ. ಈ ದೋಷಗಳನ್ನು ಕಾರ್ಯಕರ್ತರು ಪತ್ತೆಹಚ್ಚಿ ಸರಿಪಡಿಸುವ ಕೆಲಸ ಮಾಡಬೇಕು.
ನಮ್ಮ ಗ್ಯಾರಂಟಿ ಯೋಜನೆ ಟೀಕಿಸಿದವರೆ ಉಚಿತ ಯೋಜನೆ ಘೋಷಣೆ ಮಾಡಿಕೊಂಡು ಕೂತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಮ್ಮ ರಾಜ್ಯವನ್ನು ನೋಡಿ ತೆಲಂಗಾಣ, ಮಧ್ಯಪ್ರದೇಶದಲ್ಲೂ ಆರಂಭವಾಗಿದೆ. ನಮ್ಮ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದರು. ಈಗ ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನಮಗಿಂತ ಮುಂಚೆ ಉಚಿತ ಯೋಜನೆಗಳ ಬೋರ್ಡ್ ಹಾಕಿಕೊಂಡು ಕೂತಿದ್ದಾರೆ. ಅದನ್ನು ಯಾವ ಮಾಡೆಲ್ ಎಂದು ಕರೆಯಬೇಕು? ಎಂದು ಮಾರ್ಮಿಕವಾಗಿ ಡಿಸಿಎಂ ಪ್ರಶ್ನಿಸಿದರು.
ಇಂದು ದೀಪಾವಳಿ ಹಬ್ಬ, ನಾವು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗೋಣ ಎಂದು ಕರೆ ನೀಡಿದರು.