ಕೋತಿ ದಾಳಿಗೆ 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಹೊಟ್ಟೆಯನ್ನು ಸೀಳಿ ಕರುಳನ್ನು ಹೊರ ತೆಗೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗುಜರಾತ್ ನ ಗಾಂಧಿನಗರದ ಸಾಲ್ಕಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ದೀಪಕ್ ಠಾಕೂರ್ (10) ಎಂಬ ಬಾಲಕ ಮೃತಪಟ್ಟಿದ್ದಾನೆ. ದೆಹಗಾಂ ತಾಲೂಕಿನ ದೇವಸ್ಥಾನದ ಬಳಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ದಾಳಿ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೋತಿಯು ಹುಡುಗನ ಮೇಲೆ ಧಾವಿಸಿ, ತನ್ನ ಉಗುರುಗಳಿಂದ ಆಳವಾದ ಗಾಯಗಳನ್ನು ಉಂಟುಮಾಡಿತು. ನಂತರ ಹೊಟ್ಟೆಯನ್ನು ಹರಿದು ಕರುಳನ್ನು ಹೊರತೆಗೆಯಿತು.
ಮಗುವನ್ನು ರಕ್ಷಿಸಿ ಮನೆಗೆ ಕರೆತಂದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ. ಒಂದು ವಾರದಲ್ಲಿ ಗ್ರಾಮದಲ್ಲಿ ಇದು ಮೂರನೇ ಕೋತಿ ದಾಳಿಯಾಗಿದೆ. ಆಕ್ರಮಣಕಾರಿ ಮಂಗಗಳನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ವಿಶಾಲ್ ಚೌಧರಿ ತಿಳಿಸಿದ್ದಾರೆ.