ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೋ ಹರಡಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ. ಬಿಹಾರ ಮೂಲದ 19 ವರ್ಷದ ಯುವಕನನ್ನು ದೆಹಲಿ ಪೊಲೀಸರು ಪ್ರಶ್ನಿಸಿದ್ದಾರೆ. ಈ ಯುವಕನೇ ಮೊದಲು ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇನ್ ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವನ್ನು ಡೌನ್ ಲೋಡ್ ಮಾಡಿದ್ದೇನೆ ಎಂದು 19 ವರ್ಷದ ಯುವಕ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯುವಕ ಮೊದಲು ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ನಂತರ ಇದನ್ನು ಇತರ ಪ್ಲ್ಯಾಟ್ ಫಾರ್ಮ್‌ಗಳಿಗೂ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು. ಪೊಲೀಸರು ಯುವಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಐಎಫ್ ಎಸ್ ಒ ಘಟಕದ ಮುಂದೆ ಹಾಜರಾಗುವಂತೆ ಮತ್ತು ವೀಡಿಯೊವನ್ನು ಅಪ್ ಲೋಡ್ ಮಾಡಲು ಬಳಸಿರುವ ಶಂಕಿತ ಮೊಬೈಲ್ ಫೋನ್ ತರುವಂತೆ ಅವರಿಗೆ ಸೂಚಿಸಲಾಗಿದೆ. ನಟಿಯ ನಕಲಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದ ನಂತರ, ದೆಹಲಿ ಪೊಲೀಸರ ವಿಶೇಷ ಸೆಲ್ ಪ್ರಕರಣವನ್ನು ದಾಖಲಿಸಿಕೊಂಡು ನವೆಂಬರ್ 10 ರಂದು ತನಿಖೆಯನ್ನು ಪ್ರಾರಂಭಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನೂ ಬಂಧಿಸಿಲ್ಲ.