ಕೊರಟಗೆರೆ: ಗ್ರಾಮ ದೇವತೆಗಳು ಊರಿನ ಎಲ್ಲಾ ಜಾತಿ ಜನರನ್ನು ಒಗ್ಗೂಡಿಸಿ ಧಾರ್ಮಿಕ ಆಚರಣೆಯನ್ನು ಆಚರಿಸುವ ಮೂಲಕ ಸೌಹಾರ್ದತೆಯನ್ನು ಮೂಡಿಸುವುದರೊಂದಿಗೆ ದೇವಿಯು ಊರಿನ ರಕ್ಷಣೆ ಮಾಡುತ್ತಾಳೆ ಎನ್ನುವ ನಂಬಿಕೆಯಲ್ಲಿ ನೆಮ್ಮದಿಯಾಗಿ ಬಾಳುತ್ತಾರೆ ಎಂದು ಎಲೆರಾಂಪುರದ ನರಸಿಂಹಗಿರಿ ಶ್ರೀ ಕ್ಷೇತ್ರದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಅವರು ತಾಲೂಕಿನ ಕೋಳಾಲ ಹೋಬಳಿಯ ಹನುಮಂತಯ್ಯನ ಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ದೊಡ್ಡಮ್ಮ ದೇವಿಯ 48 ನೇ ದಿನದ ಮಂಡಲ ಪೂಜೆ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಗ್ರಾಮ ದೇವತೆಗಳ ಪ್ರತಿಷ್ಠಾಪನೆಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ, ಗ್ರಾಮ ದೇವತೆಯು ನಮ್ಮ ಗ್ರಾಮವನ್ನು ದುಷ್ಠಶಕ್ತಿಗಳಿಂದ ಮತ್ತು ರೋಗರುಜಿನಗಳಿಂದ ರಕ್ಷಿಸುತ್ತಾಳೆ ಎನ್ನುವ ನಂಬಿಕೆಯಲ್ಲಿ ಗ್ರಾಮದ ಪ್ರತಿಯೊಬ್ಬ ಜಾತಿ ಧರ್ಮದ ಕುಟುಂಬವು ತನ್ನ ಕೈಲಾದ ಸೇವೆಯನ್ನು ಗ್ರಾಮಸ್ಥರೊಂದಿಗೆ ಒಟ್ಟಾಗಿ ಆಚರಿಸುತ್ತಾರೆ ಎಂದರು.
ಹನುಮಂತಯ್ಯಪಾಳ್ಯದಂತಹ ಸಣ್ಣ ಗ್ರಾಮದಲ್ಲಿ ಬೃಹತ್ ದೊಡ್ಡಮ್ಮ ದೇವಿಯ ದೇವಾಲಯವು ನಿರ್ಮಾಣವಾಗಿರುವುದು ಈ ಊರಿನ ಜನರ ಸೇವಾ ಮನೋಭಾವ ಮತ್ತು ಭಕ್ತಿಯನ್ನು ತೋರಿಸುತ್ತದೆ, ಇದಕ್ಕೆ ನೀಲೇಶ್ ರವರ ಶ್ರಮವು ಸಾಕಷ್ಟು ಇದೆ ಈ ದೇವಾಲಯದ ಉದ್ಘಾಟನೆಗೆ ಮತ್ತು 48 ದಿನಗಳ ಮಂಡಲ ಪೂಜೆಗೆ ಸುಮಾರು 30ಕ್ಕೂ ಹೆಚ್ಚು ಸ್ವಾಮೀಜಿಗಳೊಂದಿಗೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಶಾಸಕರುಗಳಾದ ಜೋತಿಗಣೇಶ್, ಸುರೇಶ್ ಗೌಡ, ಸಿಮೇಟ್ ಮಂಜುನಾಥ್, ಚಂದ್ರಪ್ಪ ಸೇರಿದಂತೆ ಹಲವರು ಆಗಮಿಸಿ ದೇವತಾಕಾರ್ಯದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ ಎಂದರು.
ಉದ್ಯಮಿ ನೀಲೇಶ್ ಮಾತನಾಡಿ, ಪೂಜ್ಯ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ಹಾಗೂ ಸಮಸ್ತ ಗ್ರಾಮಸ್ಥರ ಸಹಕಾರದೊಂದಿಗೆ ದೇವತಾ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳಿಂದ ಅದ್ದೂರಿಯಾಗಿ ನಡೆದಿದೆ, ಈ ದಿನದೊಂದು ಸುತ್ತ ಮುತ್ತಲ ಗ್ರಾಮಗಳ 21 ಗ್ರಾಮದೇವರುಗಳ ಮೆರವಣಿಗೆಯು ಉತ್ಸವದ ಮೂಲಕ ನಮ್ಮ ಗ್ರಾಮವಾದ ಹನುಮಂತಯ್ಯನ ಪಾಳ್ಯಕ್ಕೆ ಬಂದು ಆಶೀರ್ವಾದಿಸಿವೆ, ಇದಕ್ಕಾಗಿ ನಮ್ಮ ಸುತ್ತಮುತ್ತಲ ಗ್ರಾಮಸ್ಥರಿಗೆ, ದೇವಾಲಯಕ್ಕೆ ಬಂದು ಶುಭ ಕೋರಿದ ಸ್ವಾಮೀಜಿಗಳಿಗೆ, ಜನಪ್ರತಿನಿಧಿಗಳಿಗೆ ಮುಖ್ಯವಾಗಿ ಎಲ್ಲಾ ಕಾರ್ಯಕ್ರಮದ ಮಾರ್ಗದರ್ಶಕರಾದ ಡಾ.ಶ್ರೀ ಹನುಮಂತನಾಥಸ್ವಾಮೀಜಿಗಳಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ತ್ರಿನೇತ್ರಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗೌರಿಶಂಕರ ಸ್ವಾಮೀಜಿ, ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ, ಶ್ರೀ ಬಸವ ರಾಜೇಂದ್ರ ಸ್ವಾಮೀಜಿ, ಶ್ರೀ ಕಾರದವೀರ ಬಸವಲಿಂಗ ಸ್ವಾಮೀಜಿ, ಮುಖಂಡರುಗಳಾದ ಮುರಳೀಧರ ಹಾಲಪ್ಪ, ರುದ್ರೇಶ್, ಆರ್.ಎಸ್.ರಾಜಣ್ಣ, ಎಸ್.ಆರ್. ರಾಜಣ್ಣ, ವೇಣುಗೋಪಾಲ್, ಹರೀಶ್ ಸೇರಿದಂತೆ ೨೧ ಗ್ರಾಮಗಳ ಪ್ರಮುಖರು ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC