ಏರುತ್ತಿರುವ ಹಣದುಬ್ಬರದ ಮಧ್ಯೆ, ಸರ್ಕಾರವು ಜನ ಸಾಮಾನ್ಯರಿಗೆ ಪರಿಹಾರ ನೀಡುವ ಪ್ರಯತ್ನಗಳನ್ನು ಕೂಡಾ ಮಾಡುತ್ತಿದೆ. ಇದೀಗ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 3 ಗ್ಯಾಸ್ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ.
ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಗೋವಾ ಸರ್ಕಾರವು ತೆಗೆದುಕೊಂಡಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಭಾರತೀಯ ಜನತಾ ಪಕ್ಷ ರಾಜ್ಯದ ಪ್ರತಿ ಕುಟುಂಬಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ಅದರಂತೆಯೇ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಘೋಷಣೆ ಮಾಡಿದ್ದಾರೆ.
ಟ್ವೀಟ್ ಮೂಲಕ ಮಾಹಿತಿ:
ಸೋಮವಾರ ಸಂಜೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್ , ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಹೊಸ ಆರ್ಥಿಕ ವರ್ಷದಿಂದ ಮೂರು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವ ಯೋಜನೆ ಸಿದ್ಧಪಡಿಸಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, ಪ್ರಸಕ್ತ ಅವಧಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಪುನರಾರಂಭ ಮತ್ತು ಉದ್ಯೋಗ ಸೃಷ್ಟಿ ತಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
2019 ರಲ್ಲಿ ಅಂದಿನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನದ ನಂತರ ಪ್ರಮೋದ್ ಸಾವಂತ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 40 ಸದಸ್ಯ ಬಲದ ಸದನದಲ್ಲಿ ಪಕ್ಷ 20 ಸ್ಥಾನಗಳನ್ನು ಗೆದ್ದುಕೊಂಡಿದೆ. ಸಾವಂತ್ ನೇತೃತ್ವದಲ್ಲಿ ಬಿಜೆಪಿ ಈ ಬಾರಿಯ ಚುನಾವಣೆಯನ್ನು ಎದುರಿಸಿತ್ತು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5