ಗುಬ್ಬಿ: ಕನ್ನಡಿಗರ ಹಬ್ಬದ ದಿನದಂದೇ ಗ್ರಾಮೀಣ ಭಾಗದ ಜನತೆಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಗುಬ್ಬಿ ನಗರದಲ್ಲಿ ಎಲ್ಲ ವೈದ್ಯಕೀಯ ಸೇವೆಗಳನ್ನು ಒಳಗೊಂಡ ನೂತನ ಚಾಲುಕ್ಯ ಹೈಟೆಕ್ ಆಸ್ಪತ್ರೆ ಪ್ರಾರಂಭವಾಗಿರುವುದು ತಾಲೂಕಿನ ಜನತೆಗೆ ವರದಾನವಾಗಲಿದ್ದು, ಒಂದೇ ಕಡೆ ಎಲ್ಲ ರೀತಿಯ ಆರೋಗ್ಯ ಸೇವೆಗಳು ಜನತೆಗೆ ದೊರೆಯುವ ನಿಟ್ಟಿನಲ್ಲಿ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಮುರಳಿಧರ್ ಮತ್ತು ನಾಗಭೂಷಣ್ ಮತ್ತು ಇವರ ಕುಟುಂಬದ ಇನ್ನು ಉಳಿದ ನಾಲ್ಕು ಜನ ವೈದ್ಯರು ಸೇರಿ ವೈದ್ಯಕೀಯ ಸೇವೆ ನೀಡಲು ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.
ಗುಬ್ಬಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಚಾಲುಕ್ಯ ಆಸ್ಪತ್ರೆ ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ಆಸ್ಪತ್ರೆಯಲ್ಲಿ 30 ಹಾಸಿಗೆಯುಳ್ಳ ಹೈಟೆಕ್ ಆಸ್ಪತ್ರೆಯಾಗಿದ್ದು ಅದರಲ್ಲಿ10 ಹಾಸಿಗೆಗಳನ್ನು ಗ್ರಾಮೀಣ ಭಾಗದ ನಿರ್ಗತಿಕರು ನಿರಾಶ್ರಿತರು ಹಾಗೂ ಅಸಹಾಯಕರಿಗೆ ಮೀಸಲಿರಿಸಿದ್ದು ಅವರಿಗೆ ಉಚಿತವಾಗಿ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ನೀಡಲು ಮುಂದಾಗಿರುವುದು ಬಹಳ ಹೆಮ್ಮೆಯ ಸಂಗತಿ .
ಕೋರೋನಾ ಸಂದರ್ಭದಲ್ಲಿ ವೈದ್ಯರು ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿ ಕೋರೋನಾ ವಿರುದ್ಧ ಹೋರಾಟ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ನಿಜಕ್ಕೂ ಶ್ಲಾಘನೀಯ. ತಾಲೂಕಿನ ಜನತೆಗೆ ಇವರ ಸೇವೆ ಹೆಚ್ಚಿನದಾಗಿ ಸಿಗಲಿ ಎಂದು ಶ್ಲಾಘಿಸಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷ ಕೊಲೆಗಡುಕ ಪಕ್ಷ. ಕೋರೋನಾ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕರ್ನಾಟಕ ರಾಜ್ಯದಲ್ಲಿ ನಾಲ್ಕು ಲಕ್ಷ ಜನರು ಸಾವಿಗೆ ತುತ್ತಾದರೆ ದೇಶದಲ್ಲಿ ಐವತ್ತು ಲಕ್ಷ ಜನರ ಸಾವಿಗೆ ಕಾರಣರಾದ ಕೆಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ನಾಚಿಕೆಗೇಡಿನ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮುಂಜಾಗೃತ ಅಗತ್ಯ ಕ್ರಮಗಳನ್ನು ಮುಂಚಿತವಾಗಿಯೇ ವಹಿಸಿದ್ದರೆ ರಾಜ್ಯದಲ್ಲಿ ಕೊರನ ಸಂದರ್ಭದಲ್ಲಿ ಸಾವು-ನೋವುಗಳು ಸಂಭವಿಸುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾದ ಕೊರೋನಾ ರೋಗಿಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳಾದ ವೆಂಟಿಲೇಟರ್ ಆಕ್ಸಿಜನ್ ಹಾಸಿಗೆ ಆಂಬುಲೆನ್ಸ್ ಸೇವೆ ಸಿಗದೆ ಎಷ್ಟೋ ಸಾವು-ನೋವುಗಳು ಸಂಭವಿಸಿದವು. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ 36 ಜನ ರೋಗಿಗಳು ಅಸುನೀಗಿದ್ದು ಬಹಳ ದುಃಖಕರ ಸಂಗತಿ ಆದರೆ ಈ ರಾಜ್ಯದ ಆರೋಗ್ಯಸಚಿವ ಡಾಕ್ಟರ್ ಸುಧಾಕರ್ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ ಆಸ್ಪತ್ರೆ ವೈದ್ಯರೊಂದಿಗೆ ಚರ್ಚೆ ನಡೆಸಿ ಸತ್ತವರ ಸಂಖ್ಯೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿ ಕೇವಲ ಮೂರು ಜನ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಸರ್ಕಾರದ ಬೇಜವಾಬ್ದಾರಿತನದ ನೀಚಬುದ್ದಿ ತೋರಿಸಿದರು. ಮರುದಿನ ಆದೇ ಆಸ್ಪತ್ರೆಗೆ ನಾನು ಮತ್ತು ಡಿಕೆ ಶಿವಕುಮಾರ್ ಭೇಟಿ ನೀಡಿ ಅಲ್ಲಿನ ವೈದ್ಯರಿಂದ ಸಮರ್ಪಕ ಮಾಹಿತಿ ಪಡೆದಾಗ 36 ಜನ ಅಮಾಯಕರು ಆಕ್ಸಿಜನ್ ಕೊರತೆಯಿಂದ ಚಿಕಿತ್ಸೆ ಸಿಗದೆ ಮರಣ ಹೊಂದಿದ ಬಗ್ಗೆ ವೈದ್ಯರು ನೀಡಿದ ಮಾಹಿತಿ ನಮಗೆ ಲಭ್ಯವಾಗಿದ್ದು ಕನಿಷ್ಠ ಸೌಜನ್ಯ ವಿಲ್ಲದ ಸರ್ಕಾರ ಇದು ಜನರ ಪ್ರಾಣ ತೆಗೆಯುವ ಸರ್ಕಾರವಾಗಿದೆ ಎಂದು ಆಕ್ರೋಶ ಹೊರಹಾಕಿದರು. ಇಂತಹ ಮಾನಗೆಟ್ಟ ಸರ್ಕಾವನ್ನು ಜನರು ಒದ್ದು ಹೊರಹಾಕಬೇಕೆಂದು ಈ ರಾಜ್ಯದ ಮತದಾರರಿಗೆ ಕರೆ ನೀಡಿದರು.
ಕರ್ನಾಟಕ ಇತಿಹಾಸದಲ್ಲಿ ಇಂಥ ನಾಚಿಕೆಗೆಟ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ಎಂದೂ ಸಹ ನೋಡಿರಲಿಲ್ಲ ನಾವು ನಮ್ಮ ಸರ್ಕಾರದ ಅವಧಿಯಲ್ಲಿ ಪಕ್ಷಭೇದವಿಲ್ಲದೆ ಜಾತಿಭೇದವಿಲ್ಲದೆ ಅನ್ನಭಾಗ್ಯ ಶಾದಿಭಾಗ್ಯ ಕ್ಷೀರಭಾಗ್ಯ ರೈತರ ಸಾಲ ಮನ್ನಾ ಇನ್ನು ಹಲವು ಜನಪರ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಪ್ರತಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಏಕೈಕ ಸರ್ಕಾರ ಕಾಂಗ್ರೆಸ್ ಸರ್ಕಾರ ಆದರೆ ಇಂದಿನ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಜನಸಾಮಾನ್ಯರ ಜೀವನದ ಮೇಲೆ ಬರೆ ಎಳೆಯುವ ಕೇಲಸ ಮಾಡುತ್ತಿದ್ದು ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದರೊಂದಿಗೆ ಜನಸಾಮಾನ್ಯರ ಮರಣ ಶಾಸನ ಬರೆಯುವ ಸರ್ಕಾರವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸರಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲು ಮುಂದಾಗಬೇಕು ಎಂದರು.
ಇದೇ ವೇಳೆಯಲ್ಲಿ ಕೋರೋನಾ ಸಂದರ್ಭದಲ್ಲಿ ಗುಬ್ಬಿ ತಾಲೂಕಿನ ಜನತೆಗೆ ಅಗತ್ಯ ಆರೋಗ್ಯ ಸೇವೆಯನ್ನು ನೀಡುವ ಮೂಲಕ ಜನ ನಾಯಕನಾಗಿರುವ ಶ್ರೀನಿವಾಸ್ ಅವರ ಸೇವೆ ಮೆಚ್ಚುವಂತದ್ದು ನೀವು ಮತ್ತು ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಇಬ್ಬರು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬರಲು ಆಹ್ವಾನ ನೀಡುತ್ತಿದ್ದು ನೀವು ಯಾವ ಸಮಯದಲ್ಲಾದರೂ ಸರಿ ನಿವುಗಳು ಕಾಂಗ್ರೆಸ್ ಪಕ್ಷಕ್ಕೆ ಬಂದರು ನಾವು ಆತ್ಮೀಯವಾಗಿ ಬರಮಾಡಿಕೊಳ್ಳುಲು ಸಿದ್ಧರಿದ್ದೇವೆ ಎಂದು ಬಹಿರಂಗವಾಗಿ ಆಹ್ವಾನ ನೀಡಿದರು.
ಇದೇ ಸಂದರ್ಭದಲ್ಲಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಇಂದು ಗುಬ್ಬಿ ನಗರದಲ್ಲಿ ನಮ್ಮ ಗ್ರಾಮದ ಪಕ್ಕದ ಊರಿನ ಯುವಕರು ತಾಲೂಕಿನ ಜನತೆಯ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಚಾಲುಕ್ಯ ಆಸ್ಪತ್ರೆಯನ್ನು ಪ್ರಾರಂಭ ಮಾಡಿರುವುದು ನಮ್ಮೆಲ್ಲರಿಗೂ ಸಂತಸದ ವಿಚಾರವಾಗಿದ್ದು ಇವರ ಆರೋಗ್ಯ ಸೇವಾ ಸೌಲಭ್ಯವನ್ನು ತಾಲೂಕಿನ ಜನತೆ ಹೆಚ್ಚಿನದಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆಸ್ಪತ್ರೆಯ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸಿದ್ದೇವೆ ಎಂದು ನನಗೆ ತಿಳಿಸಿದಾಗ ನನಗೆ ಬಹಳ ಸಂತೋಷವಾಗಿತ್ತು.ತಾಲೂಕಿನಲ್ಲಿ ಇತ್ತೀಚೆಗೆ ಬಹಳಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು ಸುಮಾರು 20 ವರ್ಷಗಳಿಂದ ಕಟ್ಟಿಬೆಳೆಸಿದ ಜೆಡಿಎಸ್ ಪಕ್ಷದ ನಾಯಕರು ನಮ್ಮನ್ನು ಪಕ್ಷದಿಂದ ಹೊರಹಾಕಲು ರಾಜಕೀಯ ನಾಟಕಗಳನ್ನು ನಡೆಸುತ್ತಿರುವುದು ನನಗೆ ಬಹಳ ಬೇಸರ ತಂದಿದೆ. ಇತ್ತೀಚೆಗೆ ಗುಬ್ಬಿ ನಗರದಲ್ಲಿ ನಡೆದ ಸಮಾವೇಶದಲ್ಲಿ ನನ್ನ ವಿರುದ್ಧ ಹೋಸ ಅಭ್ಯರ್ಥಿಯನ್ನು ಪರಿಚಯಿಸುವ ಮೂಲಕ ನನ್ನ ತೇಜೋವಧೆ ಮಾಡಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ದೇವೇಗೌಡರನ್ನು ಸೋಲಿಸಲು ನಾನೇ ಕಾರಣ ಎಂದು ಸುಳ್ಳು ಆಪಾದನೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಬೇಸರ ವ್ಯಕ್ತಪಡಿಸಿದರು. ಮಾತಿಗೂ ಮುಂಚೆ ಕತ್ತು ಕುಯ್ಯುವ ಕೆಲಸ ಮಾಡಿದ್ದೇನೆ ಎಂದು ಆರೋಪಿಸುವ ಮೊದಲು ವ್ಯಕ್ತಿಯ ಬಗ್ಗೆ ಅವಲೋಕಿಸುವುದು ಸೂಕ್ತ ಸುಖಾಸುಮ್ಮನೆ ಆರೋಪ ಮಾಡುವ ಬದಲು ನೀವು ನಂಬಿರುವ ಯಾವುದೇ ದೇವಾಲಯಕ್ಕೆ ಹೇಳಿದರು ಪ್ರಮಾಣ ನಾನು ಸಿದ್ಧನಿದ್ದೇನೆ ಇಡೀ ರಾಜ್ಯದ ಎಲ್ಲ ದೇವರುಗಳನ್ನು ನಿಮ್ಮ ಮನೆಯಲ್ಲಿ ಬಂಧಿಸಿದ್ದೀರಿ ಮಾಟ ಮಂತ್ರದಲ್ಲಿ ನೀವು ನಿಪುಣರು ನೀವು ಹೇಳಿದ ಸ್ಥಳಕ್ಕೆ ನಾನು ಬರಲು ಸಿದ್ಧ ಎಂದು ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಬಹಿರಂಗ ಸವಾಲೆಸೆದರು. ಮಾನ ಮರ್ಯಾದೆ ಇರುವ ಯಾವ ನಾಯಕರು ಸಹ ಜೆಡಿಎಸ್ ಪಕ್ಷದಲ್ಲಿ ಇರಲು ಇಚ್ಚಿಸುವುದಿಲ್ಲ ಈಗಾಗಲೇ ನೀವು ಈ ಕ್ಷೇತ್ರಕ್ಕೆ ಹೋಸ ಅಭ್ಯರ್ಥಿಯನ್ನು ಪ್ರಚಾರಕ್ಕೆ ಇಳಿಸಿ ಸಮಾವೇಶದಲ್ಲಿ ಬೇರೆ ತಾಲೂಕಿನಿಂದ ಹಣಕೊಟ್ಟು ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ಪ್ರವೃತ್ತಿ ನನ್ನದಲ್ಲ. ತಾಲೂಕಿನ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಚುನಾವಣೆ ಸಮಯದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಸುಮಾರು ಮೂವತ್ತೈದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿದ್ದೆ ನೈಜ ಉದಾಹರಣೆ. ತಾಲೂಕಿನಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನತೆಯ ಅಭಿಮಾನವೇ ನನಗೆ ಶ್ರೀರಕ್ಷೆ. ಮುಂದಿನ ದಿನಗಳಲ್ಲಿ ಜನತೆಯ ತೀರ್ಮಾನದಂತೆ ಅವಕಾಶ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಧುಗಿರಿ ಮಾಜಿ ಶಾಸಕ ಕೆ ಎನ್ ರಾಜಣ್ಣ, ಮಾಜಿ ಸಚಿವ ಟಿಬಿ ಜಯಚಂದ್ರ, ಮಾಜಿ ಎಂಎಲ್ಸಿ ಎಚ್ಎಂ ರೇವಣ್ಣ, ಎಂಎಲ್ಸಿ ಬೆಮಲ್ ಕಾಂತರಾಜು, ಯುವ ಕಾಂಗ್ರೆಸ್ ಮುಖಂಡ ರಾಜೇಂದ್ರ, ಪ್ರಜಾ ಪ್ರಗತಿ ಪತ್ರಿಕಾ ಸಂಪಾದಕ ಎಸ್. ನಾಗಣ್ಣ, ಕಾಂಗ್ರೆಸ್ ಮುಖಂಡ ರವೀಂದ್ರ ಶ್ರೀಕಂಠೇಗೌಡ, ಪಟ್ಟಣ ಪಂಚಾಯತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಭರತ್ ಗೌಡ, ಪಟೇಲ್ ದೇವರಾಜು, ಗುಬ್ಬಿ ಪಟ್ಟಣ ಪಂಚಾಯಿತಿಯ ಸದಸ್ಯರು,ಕುರುಬ ಸಮುದಾಯದ ಅಧ್ಯಕ್ಷರು, ಮುಖಂಡರುಗಳು, ಕಾಂಗ್ರೆಸ್ ಮುಖಂಡರುಗಳು, ಕಾರ್ಯಕರ್ತರು, ಹಾಗೂ ಇನ್ನಿತರರು ಹಾಜರಿದ್ದರು.
ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ