ಮೈಸೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ 1 ಲಕ್ಷ ಜನರು ಗ್ರಾಮ ತೊರೆದಿದ್ದು, 30 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಮಂಡ್ಯದ ಕೊನ್ನಾಪುರ ಗ್ರಾಮಕ್ಕೆ ಭೇಟಿ ನೀಡಿದ ಅವರು ಆತ್ಮಹತ್ಯೆಗೆ ಶರಣಾದ ತಾಯಿ ಮತ್ತು ಮಗನ ಮನೆಗೆ ಗುರುವಾರ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸುಗ್ರೀವಾಜ್ಞೆ ತರುತ್ತೇವೆಂದು ಹೇಳಿ ಒಂದು ತಿಂಗಳು ಕಳೆದಿದೆ. ಮಂಡ್ಯ ಜಿಲ್ಲೆಯಲ್ಲಿ ದಲಿತರ ಪ್ರದೇಶದಲ್ಲಿ 6 ಮಂದಿ ಊರು ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಜನರು ಗ್ರಾಮ ತೊರೆದಿದ್ದಾರೆ. 30 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರ ಸುಗ್ರೀವಾಜ್ಞೆ ತರಲಿಲ್ಲ ಎಂದರೆ, ಈ ಸಾವುಗಳು ನಿಲ್ಲುವುದಿಲ್ಲ ಎಂದು ಹೇಳಿದರು.
ಕೊನ್ನಾಪುರದಲ್ಲಿ ತಾಯಿ ಪ್ರೇಮಾ ಮತ್ತು ಮಗ ರಂಜಿತ್ ಮೈಕ್ರೋ ಫೈನಾನ್ಸ್ನ ಸಾಲ ತೀರಿಸಲಾಗದೆ ಕೊನ್ನಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡವರ ಪರ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರಿಗೆ ಕಣ್ಣಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊನ್ನಾಪುರ ಗ್ರಾಮದಲ್ಲಿ ಚಾಮುಂಡೇಶ್ವರಿ, ನವಚೇತನ, ಸೂರ್ಯೋದಯ, ಯುನಿಟಿ, ಪ್ರಗತಿ ಸೇರಿದಂತೆ 24 ಮೈಕ್ರೋ ಫೈನಾನ್ಸ್ಗಳು ಈ ಹಳ್ಳಿಗೆ ಬಂದು ವರ್ಷಕ್ಕೆ ಶೇ.12 ರಂತೆ ಸಾಲ ನೀಡಿವೆ. ಒಬ್ಬರಿಗೆ 9 ಜನರು ಶೂರಿಟಿ ನೀಡಿದ್ದಾರೆ.
ಒಬ್ಬರು ಸಾಲ ಮರುಪಾವತಿ ಮಾಡಿಲ್ಲವೆಂದರೆ ಉಳಿದವರು ಹೊಣೆಯಾಗುತ್ತಾರೆ. ಸಾಲ ಕಟ್ಟದೆ ಮಾನ ಹೋದಾಗ ನೊಂದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪೊಲೀಸರು ಕೂಡ ಇಲ್ಲಿ ಮೈಕ್ರೋ ಫೈನಾನ್ಸ್ಗೆ ಬೆಂಬಲ ನೀಡಿದ್ದಾರೆ. ಮನೆ ವಶಕ್ಕೆ ಪಡೆಯುವ ಸಮಯದಲ್ಲಿ ಪೊಲೀಸರು ಕುಟುಂಬದ ಸದಸ್ಯರನ್ನು ಎಳೆದು ಹೊರಗೆ ಹಾಕಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಮಂಡ್ಯದಲ್ಲಿ 60 ಮೈಕ್ರೋ ಫೈನಾನ್ಸ್ಗಳಿದ್ದು, ಕೇವಲ 18 ಮಾತ್ರ ಅಧಿಕೃತವಾಗಿವೆ. ಉಳಿದವುಗಳಲ್ಲಿ ರೌಡಿಗಳಿದ್ದಾರೆ. ತಹಶೀಲ್ದಾರ್ ಹಾಗೂ ಪೊಲೀಸರು ಎಲ್ಲಾ ಹಳ್ಳಿಗೂ ಹೋಗಿ ಕ್ರಮ ಕೈಗೊಳ್ಳಬೇಕಿತ್ತು. ಈ ಸಾವುಗಳಿಗೆ ನ್ಯಾಯ ನೀಡಲು ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಬೇಕು. ಅನಧಿಕೃತ ಮೈಕ್ರೋ ಫೈನಾನ್ಸ್ಗಳನ್ನು ಪತ್ತೆ ಮಾಡಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx