ಭಾರತ ಐಕ್ಯತಾ ಯಾತ್ರೆ 3,000 ಕಿ.ಮೀ ದೂರವನ್ನು ಕ್ರಮಿಸಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆ 3,000 ಕಿ.ಮೀ ದೂರವನ್ನು ಕ್ರಮಿಸಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ಐತಿಹಾಸಿಕ ಪಯಣದಲ್ಲಿ ನಮ್ಮ ಜೊತೆಯಾದ ಸಮಸ್ತ ಭಾರತೀಯರಿಗೆ ಕಾಂಗ್ರೆಸ್ ಪಕ್ಷ ಆಭಾರಿಯಾಗಿದೆ ಎಂದಿದ್ದಾರೆ.
ಭಾರತ ಐಕ್ಯತಾ ಯಾತ್ರೆಯ ಆರಂಭದ ದಿನಗಳಲ್ಲಿ ಬಿಜೆಪಿಯವರು ನಡೆಸಿದ ವ್ಯವಸ್ಥಿತ ಅಪಪ್ರಚಾರ, ತೇಜೋವಧೆ, ಅವಮಾನ ಇವುಗಳನ್ನೇ ಯಾತ್ರೆಯ ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತಿಸಿಕೊಂಡ ರಾಹುಲ್ ಗಾಂಧಿ ಅವರ ಸಂಯಮ, ಬದ್ಧತೆ ಮತ್ತು ಇಚ್ಛಾಶಕ್ತಿಗೆ ನನ್ನದೊಂದು ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರು ಈ ಯಾತ್ರೆಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ, ನೊಂದವರಿಗೆ ಭರವಸೆಯಾಗಿ, ಅನ್ನದಾತನಿಗೆ ಹೆಗಲಾಗಿ, ಯುವಕರಿಗೆ ಆಶಾಕಿರಣವಾಗಿ, ಎಲ್ಲರೊಳಗೊಬ್ಬರಾಗಿ ಹೆಜ್ಜೆಹಾಕಿದ್ದು ಅವರ ನೈಜ ವ್ಯಕ್ತಿತ್ವವನ್ನು ಜಗದೆದುರು ಅನಾವರಣಗೊಳಿಸಿದೆ ಎಂದಿದ್ದಾರೆ.
ಒಡೆದಿರುವ ಮನೆ ಮನಗಳನ್ನು ಒಂದುಗೂಡಿಸುವ ಸದುದ್ದೇಶದ ಭಾರತ ಐಕ್ಯತಾ ಯಾತ್ರೆ ತನ್ನ ಗುರಿಯನ್ನು ತಲುಪುವುದರಲ್ಲಿ ಯಾವ ಸಂದೇಹವೂ ಇಲ್ಲ. ಇಂಥದ್ದೊಂದು ಲೋಕಕಲ್ಯಾಣದ ಕಾರ್ಯಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ರಾಹುಲ್ ಗಾಂಧಿ ಅವರಿಗೆ ಸಮಸ್ತ ಭಾರತೀಯರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


