ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳನ್ನು (ಕೆಪಿಎಸ್) ಆರಂಭಿಸುವ ಸರ್ಕಾರದ ನಿರ್ಧಾರದ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಕಳೆದ ಮೂರು ವರ್ಷಗಳಲ್ಲಿ 31 ಹೊಸ ಕೆಪಿಎಸ್ ಶಾಲೆಗಳನ್ನು ಸ್ಥಾಪಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಎಂಎಲ್ ಸಿ ಹನುಮಂತ್ ನಿರಾಣಿ ಮತ್ತು ಕಾಂಗ್ರೆಸ್ ಎಂಎಲ್ಸಿ ಬಿಲ್ಕಿಸ್ ಬಾನು ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, 2022 ರಿಂದ 2025ರ ಅವಧಿಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳನ್ನು ವಿಲೀನಗೊಳಿಸುವ ಮೂಲಕ ಈ ಶಾಲೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟು 131 ಕೆಪಿಎಸ್ ಶಾಲೆಗಳು: 2018 ರಿಂದ 2025 ರವರೆಗೆ 35 ಉರ್ದು ಮಾಧ್ಯಮ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗಿತ್ತು. 2025–26ನೇ ಸಾಲಿನಲ್ಲಿ ಸುಮಾರು 100 ಉರ್ದು ಮಾಧ್ಯಮ ಮತ್ತು ಮೌಲಾನಾ ಆಜಾದ್ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಒಟ್ಟು ಸಂಖ್ಯೆ 131ಕ್ಕೆ ಏರಿಕೆಯಾಗಿದೆ.
ದ್ವಿಭಾಷಾ ಶಿಕ್ಷಣ: ಕೆಪಿಎಸ್ ಶಾಲೆಗಳಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ದ್ವಿಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತದೆ. ಇದರೊಂದಿಗೆ ಕಂಪ್ಯೂಟರ್ ಮತ್ತು ಕೌಶಲ್ಯ ತರಬೇತಿ ಕೋರ್ಸ್ಗಳಿಗೂ ಆದ್ಯತೆ ನೀಡಲಾಗುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಶೇ. 11.20 ರಷ್ಟು ಕಡಿಮೆಯಾಗಿದೆ. ಇದು ಕೆಪಿಎಸ್ ಶಾಲೆಗಳ ಆರಂಭದಿಂದ ಆಗಿದ್ದಲ್ಲ, ಬದಲಾಗಿ ಪೋಷಕರು ಇಂಗ್ಲಿಷ್ ಮಾಧ್ಯಮ ಮತ್ತು ಸಿಬಿಎಸ್ಇ ಶಾಲೆಗಳತ್ತ ಆಕರ್ಷಿತರಾಗುತ್ತಿರುವುದು ಮುಖ್ಯ ಕಾರಣ ಎಂದು ಸಚಿವರು ವಿವರಿಸಿದರು.
ಯಾವುದೇ ಶಾಲೆಯನ್ನು ಮುಚ್ಚಿ ಕೆಪಿಎಸ್ ಆರಂಭಿಸುತ್ತಿಲ್ಲ. ಪೋಷಕರ ಮೇಲೆ ಯಾವುದೇ ಒತ್ತಡ ಹೇರುತ್ತಿಲ್ಲ ಮತ್ತು ಇದು ಪೋಷಕರಿಗೆ ಆರ್ಥಿಕ ಹೊರೆಯೂ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನರಾಧ್ಯ ಅವರು ಸರ್ಕಾರದ ಈ ನಡೆಯನ್ನು ಟೀಕಿಸಿದ್ದಾರೆ. ಹಳ್ಳಿಗಳಲ್ಲಿನ ಶಾಲೆಗಳನ್ನು ‘ಮ್ಯಾಗ್ನೆಟ್ ಶಾಲೆ’ಗಳ ಹೆಸರಿನಲ್ಲಿ ವಿಲೀನಗೊಳಿಸುವ ಮೂಲಕ ಸದ್ದಿಲ್ಲದೆ ಮುಚ್ಚಲಾಗುತ್ತಿದೆ. ಇದು ಶಿಕ್ಷಣ ಹಕ್ಕು ಕಾಯಿದೆಯ (RTE) ‘ನೆರೆಹೊರೆಯ ಶಾಲಾ’ ಪರಿಕಲ್ಪನೆಯನ್ನು ಉಲ್ಲಂಘಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸುಮಾರು 800 ಕೆಪಿಎಸ್ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ 3,900 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂಬುದು ಗಮನಾರ್ಹ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


