ಬುಡಕಟ್ಟು ಬಹುಸಂಖ್ಯಾತ ಗ್ರಾಮಗಳು ಮತ್ತು ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಬುಡಕಟ್ಟು ಕುಟುಂಬಗಳಿಗೆ ಸಂಪೂರ್ಣತೆಯನ್ನು ಸಾಧಿಸುವ ಮೂಲಕ, ಬುಡಕಟ್ಟು ಸಮುದಾಯಗಳ ಸಾಮಾಜಿಕ–ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಧಾನ ಮಂತ್ರಿ ಜನಜಾತಿಯ ಉನ್ನತ್ ಗ್ರಾಮ ಅಭಿಯಾನ ಕಾರ್ಯಕ್ರಮ ದೇಶದಾದ್ಯಂತ ನಡೆಯಲಿದೆ. ಈ ಅಭಿಯಾನವು ಬುಡಕಟ್ಟು ಪ್ರದೇಶಗಳಲ್ಲಿ ಭಾರತ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಮಾಜಿಕ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಜೀವನೋಪಾಯದಲ್ಲಿನ ನಿರ್ಣಾಯಕ ಅಂತರವನ್ನು ನಿವಾರಿಸುವ ಗುರಿಯನ್ನು ಹೊಂದಿದ್ದು, ಬುಡಕಟ್ಟು ಪ್ರದೇಶಗಳಲ್ಲಿ ಕಲಿಕೆ ಮತ್ತು ಯಶಸ್ಸಿನ ಆಧಾರದ ಮೇಲೆ ಬುಡಕಟ್ಟು ಪ್ರದೇಶಗಳು ಮತ್ತು ಸಮುದಾಯಗಳ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸಲಿದೆ.
ಈ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಜನಾಂಗದವರು ಹೆಚ್ಚಾಗಿರುವ ವಿವಿಧ ತಾಲೂಕುಗಳ ಒಟ್ಟು 31 ಗ್ರಾಮಗಳನ್ನು , ಕೇಂದ್ರ ಬುಡಕಟ್ಟು ಮಂತ್ರಾಲಯದಿಂದ ಪ್ರಧಾನ ಮಂತ್ರಿ ಜನಜಾತೀಯ ಉನ್ನತ ಗ್ರಾಮ ಅಭಿಯಾನದಡಿ ಅಭಿವೃದ್ಧಿ ಪಡಿಸಲು ಆಯ್ಕೆ ಮಾಡಿದ್ದು, ಸದರಿ ಗ್ರಾಮಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೂಲಭೂತ ಸೌಕರ್ಯ, ಆರ್ಥಿಕ ಸಬಲೀಕರಣ, ಉತ್ತಮ ಶಿಕ್ಷಣಕ್ಕೆ ಪ್ರವೇಶ ಮತ್ತು ಆರೋಗ್ಯಕರ ಗೌರವಾನ್ವಿತ ಜೀವನ ಈ ಎಲ್ಲಾ ಗುರಿಗಳೊಂದಿಗೆ ಗ್ರಾಮಗಳ ಅಭಿವೃದ್ಧಿ ಪಡಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ.
ಈ ಅಭಿಯಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಿರಿಸಿದ ರೂ.79,156 ಕೋಟಿಗಳಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆ ಇರುವ ದೇಶದ 63,000 ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಕ್ರಿಯಾ ಯೋಜನೆ ರೂಪಿಸಿ, ಕೇಂದ್ರ ಬುಡಕಟ್ಟು ಮಂತ್ರಾಲಯ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯೊಂದಿಗೆ 5 ಕೋಟಿ ಜನರಿಗೆ ಯೋಜನೆಯಿಂದ ಅನುಕೂಲವಾಗಲಿದೆ. 2024–25 ರಿಂದ 2028–29ನೇ ಸಾಲಿನವರೆಗೆ 5 ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. 2024–25 ರಿಂದ 2025–26 ನೇ ಸಾಲಿಗೆ ರೂ.4,000 ಕೋಟಿ ಅನುದಾನವನ್ನು ಈ ಯೋಜನೆಗೆ ನಿಗದಿ ಮಾಡಲಾಗಿದೆ.
ಈ ಅಭಿಯಾನದಡಿ ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದ ಜನಾಂಗದವರು ಹೆಚ್ಚಾಗಿರುವ 31 ಗ್ರಾಮಗಳನ್ನು ಆಯ್ಕೆ ಮಾಡಿ ಭೌತಿಕ ಗುರಿ ನಿಗಧಿಪಡಿಸಲಾಗಿದ್ದು, 17 ವಿವಿಧ ಇಲಾಖೆಗಳು ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪಕ್ಕಾ ಮನೆ, ಸಂಪರ್ಕ ರಸ್ತೆಗಳು, ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ನೀರು ಸರಬರಾಜು, ವಿದ್ಯುತ್ ಇಲಾಖೆಯಿಂದ ಮನೆಗಳಿಗೆ ವಿದ್ಯುದ್ದೀಕರಣ, ಇಂಧನ ಇಲಾಖೆಯಿಂದ ಸೌರ ವಿದ್ಯುತ್ ಯೋಜನೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯಿಂದ ಎಲ್.ಪಿ.ಜಿ ಅನಿಲ ಪಿ.ಎಂ ಉಜ್ವಲ ಯೋಜನೆಯಡಿ ಸಂಪರ್ಕಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ, ಪೋಷಣ್ ಅಭಿಯಾನ, ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಆಯುಷ್ ಇಲಾಖೆಯಿಂದ ಪೋಷಣ್ ವಾಟಿಕಾಸ್, ಟೆಲಿಕಾಂ ಇಲಾಖೆಯಿಂದ ಯುನಿವರ್ಸಲ್ ಸೇವೆ (ನೆಟ್) ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸ್ಕಿಲ್ ಇಂಡಿಯಾ, ಮಾಹಿತಿ ತಂತ್ರಾಜ್ಞಾನ, ಎಲೆಕ್ಟ್ರಾನಿಕ್ಸ್ ಇಲಾಖೆಯಿಂದ ಡಿಜಿಟಲ್ ಇನಿಶಿಯೇಟಿವ್ಸ್, ಕೃಷಿ ಇಲಾಖೆಯಿಂದ ಸುಸ್ಥಿರ ಕೃಷಿ ಉತ್ತೇಜನ, ಮೀನುಗಾರಿಕೆ ಇಲಾಖೆಯಿಂದ ಮೀನುಗಾರಿಕೆಗೆ ಬೆಂಬಲ, ಪಶುಸಂಗೋಪನೆ ಇಲಾಖೆಯಿಂದ ಜಾನುವಾರು ಪಾಲನೆ, ಪಂಚಾಯತ್ ರಾಜ್ ಇಲಾಖೆಯಿಂದ ಸಾಮರ್ಥ್ಯ ಕಟ್ಟಡ ನಿರ್ಮಾಣ, ಪ್ರವಾಸೋದ್ಯಮ ಇಲಾಖೆಯಿಂದ ಟ್ರೈಬಲ್ ಹೋಂ ಸ್ಟೇಸ್ ಸ್ವದೇಶ ದರ್ಶನ, ಬುಡಕಟ್ಟು ವ್ಯವಹಾಗಳ ಸಚಿವಾಲಯದಿಂದ ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಗಳು ಅನುಷ್ಠಾನಗೊಳ್ಳಲಿವೆ.
ಪ್ರಧಾನ ಮಂತ್ರಿ ಜನಜಾತಿಯ ಉನ್ನತ್ ಗ್ರಾಮ ಅಭಿಯಾನದಡಿ ಜಿಲ್ಲೆಯಲ್ಲಿ,ಹಳಿಯಾಳ ತಾಲೂಕಿನ 1, ಭಟ್ಕಳದ 3 ಜೋಯಿಡಾದ 4 ಮತ್ತು ಮುಂಡಗೋಡ ತಾಲೂಕಿನ 23 ಸೇರಿದಂತೆ ಒಟ್ಟು 31 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಈ ಗ್ರಾಮಗಳಲ್ಲಿ ಬುಡಕಟ್ಟು ಬಹು ಉಪಯೋಗಿ ಮಾರ್ಕೇಟಿಂಗ್ ಕೇಂದ್ರಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿ ನಿಲಯಗಳು ಸರ್ಕಾರಿ ಅಥವಾ ರಾಜ್ಯ ಬುಡಕಟ್ಟು ವಸತಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲಾಗುವುದು. ಸಿಕಲ್ ಸೇಲ್ ಪರೀಕ್ಷಾ ಕೇಂದ್ರ ಮತ್ತು ಕೌನ್ಸಿಲಿಂಗ್ ಬೆಂಬಲ, ಅರಣ್ಯ ಹಕ್ಕು ಕಾಯ್ದೆ-2006 ಮತ್ತು ಸಮುದಾಯ ಅರಣ್ಯ ಹಕ್ಕು ನಿರ್ವಹಣೆ, ಉತ್ಪನ್ನಗಳ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗುತ್ತದೆ.
–ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾಧಿಕಾರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q