ತುಮಕೂರು: ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 325 ಬಾಲಕಿಯರು ಗರ್ಭ ಧರಿಸಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶರಾದ ನೂರುನ್ನೀಸಾ ಹೇಳಿದರು.
ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಬುಧವಾರ ರಾಜ್ಯ ಮಾನವ ಹಕ್ಕುಗಳ ಆಯೋಗ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತದ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬಾಲಕಿಯರು ಗರ್ಭ ಧರಿಸುವ ಪ್ರಕರಣಗಳು ಹೆಚ್ಚುತ್ತಿವೆ. ಈಗಾಗಲೇ ವರದಿಯಾಗಿರುವ 325 ಪ್ರಕರಣಗಳಲ್ಲಿ 230 ಪ್ರಕರಣಗಳ ಬಗ್ಗೆ ವಯಸ್ಸಿನ ಖಾತರಿ ಪಡಿಸುವ ಪ್ರಕ್ರಿಯೆ ಜಿಲ್ಲಾ ಆಸ್ಪತ್ರೆ ಹಂತದಲ್ಲಿ ನಡೆದಿದೆ ಎಂದು ಹೇಳಿದರು.

ಗಡಿ ಭಾಗಗಳಲ್ಲಿ ಪೋಕ್ಸೋ, ಬಾಲ ಗರ್ಭಿಣಿ, ಮಕ್ಕಳು ಕಾಣೆಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಶಾಲಾ–ಕಾಲೇಜು, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಬೇಕು. ನಾಗರಿಕರಲ್ಲಿ ಅರಿವು ಮೂಡಿಸಿ ಮಾನವ ಹಕ್ಕು ಉಲ್ಲಂಘನೆ ಆಗದಂತೆ ತಡೆಯಬೇಕು ಎಂದು ಸಲಹೆ ಮಾಡಿದರು.
ವಿದ್ಯೋದಯ ಫೌಂಡೇಷನ್ ಟ್ರಸ್ಟ್ ಸಿಇಒ ಪ್ರೊ.ಕೆ.ಚಂದ್ರಣ್ಣ, ಶಿಕ್ಷಣವು ವ್ಯಕ್ತಿಯಲ್ಲಿ ಜ್ಞಾನ, ಶಿಸ್ತು ಬೆಳೆಸುತ್ತದೆ. ವಿದ್ಯೆ ಮತ್ತು ಜ್ಞಾನ ಮನದಲ್ಲಿ ಗಟ್ಟಿಯಾಗಿ ಬೇರೂರಿದರೆ ನಾವು ಉದ್ಯೋಗ ಹುಡುಕಬೇಕಿಲ್ಲ, ಉದ್ಯೋಗವೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ವಿದ್ಯಾರ್ಥಿಗಳು ಗುರಿಯ ಕಡೆಗೆ ಗಮನ ಕೇಂದ್ರೀಕರಿಸಬೇಕು ಎಂದರು.
ವಿಶ್ವ ಮಾನವ ಹಕ್ಕುಗಳ ದಿನದ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮುರಳೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವ ಕು.ಮಿರ್ಜಿ, ವಿದ್ಯೋದಯ ಕಾನೂನು ಕಾಲೇಜು ಪ್ರಾಂಶುಪಾಲರಾದ ಶಮಾ ಸೈಯದಿ, ಕಾಲೇಜಿನ ಎನ್.ಎಸ್.ಮಂಜುಳಾ ಇತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


