ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ 407 ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ 9 ಗಂಟೆಯಲ್ಲಿ ಪಾವಗಡ ತಾಲೂಕಿನ ಬುಗುಡೂರು ಗ್ರಾಮದ ತಿರುವಿನ ಬಳಿ ನಡೆದಿದೆ.
ಈ ಅಪಘಾತದಲ್ಲಿ ಹತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಕ್ಷಣವೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ವಿವರ:
ಬಿ.ಹೊಸಳ್ಳಿ ತಾಂಡ ಗ್ರಾಮದ ಲಂಬಾಣಿ ಸಮುದಾಯದ ಪುರುಷರು ಹಾಗೂ ಮಹಿಳಾ ಕಾರ್ಮಿಕರು ತಿರುಮಣಿ ಭಾಗದಲ್ಲಿ ಶುಕ್ರವಾರ ಸೆಂಟ್ರಿಂಗ್ ಕೆಲಸಕ್ಕೆ ತೆರಳಿ, ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಮರಳಿ ಬರುವ ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ 55 ವರ್ಷದ ತಿಪ್ಪ ನಾಯಕ್ ಅವರ ಒಂದು ಕೈ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಕ್ಷಮ್ಮ, ಅರುಣಾ, ಕಾವೇರಿ, ಶಾಂತಮ್ಮ, ಶಾಂತಾಬಾಯಿ, ಪ್ರಕಾಶ್, ದೇವಿ ಬಾಯಿ, ಸಕ್ಕಬಾಯಿ ಸೇರಿದಂತೆ ಹಲವರ ತಲೆ, ಸೊಂಟ ಹಾಗೂ ಇತರ ಅಂಗಾಂಗಗಳಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳಿಗೆ ಪಾವಗಡ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎ.ಎಸ್.ಎಲ್. ಬಾಬು, ಡಾ. ರಾಜೇಶ್, ಡಾ. ಆಶಿಕ್ ಗೌಡ, ಕಲ್ಲೇಶ್ ಮತ್ತು ಅವರ ತಂಡ ತಕ್ಷಣವೇ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿದರು.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದು, ಪಾವಗಡ ವೃತ್ತ ನಿರೀಕ್ಷಕ ಸುರೇಶ್ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಘಟನೆ ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4