ನವದೆಹಲಿ: ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಮೃತಪಟ್ಟ ದಾರುಣ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಸತತ ಮಳೆಯಿಂದ ಹುಮಾಯೂನ್ ಸಮಾಧಿಯ ಹಿಂದೆ ಇರುವ ಫತೇಹ್ ಶಾ ಎಂಬ ದರ್ಗಾದ ಗೋಡೆ ಮತ್ತು ಛಾವಣಿಯ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಪರಿಣಾಮ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಮಧ್ಯಾಹ್ನ 3:55ಕ್ಕೆ ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಬಗ್ಗೆ ಮಾಹಿತಿ ಬಂದಿದ್ದು, ತಕ್ಷಣ ಸ್ಥಳಕ್ಕೆ ದೌಡಾಯಿಸಿದ ನಿಜಾಮುದ್ದೀನ್ ಪೊಲೀಸ್ ಠಾಣೆಯ ಎಸ್ ಎಚ್ ಒ ಮತ್ತು ಸ್ಥಳೀಯ ಪೊಲೀಸ್ ತಂಡ ರಕ್ಷಣಾ ಕಾರ್ಯ ಕೈಗೊಂಡಿದೆ. ಬಳಿಕ ಅಗ್ನಿಶಾಮಕ ದಳ, ಸಿಎಟಿ ಆಂಬ್ಯುಲೆನ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಕೂಡ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ಸೇರಿಕೊಂಡಿತು.
ಇಲ್ಲಿಯವರೆಗೆ 11 ಜನರನ್ನು ಅವಶೇಷಗಳಿಂದ ರಕ್ಷಿಸಲಾಗಿದೆ. ಗಾಯಾಳುಗಳನ್ನು ಏಮ್ಸ್ ಟ್ರಾಮಾ ಸೆಂಟರ್ ಮತ್ತು ಲೋಕ ನಾಯಕ್ ಆಸ್ಪತ್ರೆ (ಎಲ್‌ಎನ್‌ಜೆಪಿ) ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಕೆಲವು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರ ಅಧಿಕೃತ ಅಂಕಿ – ಅಂಶ ಇನ್ನೂ ಲಭ್ಯವಾಗಿಲ್ಲ. ಅವಶೇಷಗಳನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕಿದೆ. ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಿದ ನಂತರವೇ ನಿಖರವಾದ ಹಾನಿ ಮತ್ತು ಗಾಯಗೊಂಡ ಜನರ ಸಂಖ್ಯೆಯ ಬಗ್ಗೆ ತಿಳಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC