ಔರಾದ್: ತಾಲೂಕಿನ ಹೆಡಗಾಪೂರ ಗ್ರಾಮದ ಶಿವಲಿಂಗೇಶ್ವರ ಸಂಸ್ಥಾನ ಮಠಕ್ಕೆ ಕೇದಾರಲಿಂಗ ದೇವರ ಪಟ್ಟಾಧಿಕಾರ ಕಾರ್ಯಕ್ರಮ ಏ. 15ರಂದು ಸಂಭ್ರಮದಿಂದ ನಡೆಯಲಿದೆ. ಸಮಾರಂಭದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ ಎಂದು ಹೆಡಗಾಪೂರ ಶ್ರೀಗಳಾದ ಶಿವಲಿಂಗ ಶಿವಾಚಾರ್ಯರು ಹೇಳಿದರು.
ಸೋಮವಾರ ತಾಲೂಕಿನ ಹೆಡಗಾಪೂರ ಗ್ರಾಮದ ಶಿವಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಏ.8 ರಿಂದ 15ರವರೆಗೆ ನಡೆಯಲಿರುವ ಗುರುವಂದನಾ ಮತ್ತು ಗುರುಪಟ್ಟಾಧಿಕಾರ ಮಹೋತ್ಸವ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.
1961ರಲ್ಲಿ ನನಗೆ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರು ಕರೆತಂದು ಈ ಮಠಕ್ಕೆ ಪಟ್ಟಾಧಿಕಾರ ಮಾಡಿಸಿದ್ದಾರೆ. ಧರ್ಮದ ಆಚರಣೆ, ಭಕ್ತರಿಗೆ ಒಳ್ಳೆಯ ಮಾರ್ಗ ನೀಡುವ ಕೆಲಸ ಸಂಸ್ಥಾನ ಮಠ ಮಾಡಿಕೊಂಡು ಬಂದಿದೆ. ಈಗ ನನಗೆ ವಯಸ್ಸಾಗಿದೆ. ಆದ್ದರಿಂದ ಕೇದಾರಲಿಂಗ ದೇವರಿಗೆ ಪಟ್ಟಾಧಿಕಾರ ಮಾಡುತ್ತಿದ್ದೇವೆ. ತಂದೆ-ತಾಯಿ ಸಂಬಂಧ ತೊರೆದು, ಸಮಾಜವೇ ಅವರಿಗೆ ತಂದೆ-ತಾಯಿಯ ರೂಪದಲ್ಲಿ ಬೆನ್ನಿಗೆ ನಿಲ್ಲಬೇಕು. ಎಲ್ಲರ ಕರುಣೆ ಅವರೊಂದಿಗಿರಲಿ ಎಂದು ಹೇಳುತ್ತ ಕಣ್ಣೀರು ಹಾಕಿದರು.
ಮಠದಲ್ಲಿ 50 ಮಕ್ಕಳ ವಸತಿ ಶಾಲೆ ಆರಂಭಿಸಲಾಯಿತು. ಇದಕ್ಕೆ ಗ್ರಾಮಸ್ಥರು ಸಹಾಯ ಮಾಡುತ್ತಿದ್ದರು. ಈಗ ಸಂಸ್ಥೆಯನ್ನು ಸರಕಾರದ ಅಧೀನಕ್ಕೆ ನೀಡಲಾಗಿದೆ. ಹೆಡಗಾಪೂರ ಗ್ರಾಮಸ್ಥರು ಸೇರಿದಂತೆ ಭಕ್ತರು ಮಠದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದರು.
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, ಹೆಡಗಾಪೂರ ಮಠ ವೀರಶೈವ ಲಿಂಗಾಯತ, ಬಸವ ತತ್ವ ಸಿದ್ಧಾಂತದ ಮೇಲೆ ಕಾರ್ಯ ನಿರ್ವಹಿಸಿದೆ. ಗ್ರಾಮದಲ್ಲಿ ಶಾಂತಿ ನೆಮ್ಮದಿ ಕಾಪಾಡುವಲ್ಲಿ ಶ್ರೀಗಳ ಪಾತ್ರವಿದೆ. ಶಾಲೆ ಸ್ಥಾಪಿಸಿ ಶಿಕ್ಷಣ ನೀಡಿದ್ದಾರೆ. ಇಲ್ಲಿಯ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇವರ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದ ಕೇದಾರಲಿಂಗ ದೇವರು ಅವರನ್ನು ಮಠಕ್ಕೆ ಪಟ್ಟಾಧಿಕಾರ ಮಾಡುತ್ತಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.
ಈ ವೇಳೆ ಕೇದಾರಲಿಂಗ ದೇವರು, ಚಿಟಗುಪ್ಪ ಶ್ರೀಗಳಾದ ಗುರುಲಿಂಗ ಶಿವಾಚಾರ್ಯರು, ಬಮ್ಮಲಿಂಗ ದೇವರು, ಭೋಜಾಲಿಂಗ ದೇವರು, ಶಿವಬಸವ ದೇವರು, ಪ್ರಮುಖರಾದ ರಾಜಶೇಖರ ಪಾಟೀಲ್, ಶ್ರೀಮಂತ ಪಾಟೀಲ್, ಬಸವರಾಜ ನಿಟ್ಟೂರೆ, ಶಾಮರಾವ ಬೆಳಕುಣೆ, ಅಭಿಷೇಕ್ ಸ್ವಾಮಿ, ಧನರಾಜ ಬೆಳಕುಣೆ, ಬಸವರಾಜ ಕುಣಿಕೇರೆ, ಮಹಾದೇವ ಕುಣಿಕೇರೆ, ಬಸವರಾಜ ಮಾಶಿಮಾಡೆ, ಶಿವಲಿಂಗ, ಸುನಿಲ ಪಾಟೀಲ್ ಸೇರಿದಂತೆ ಅನೇಕರಿದ್ದರು.
ಕಾರ್ಯಕ್ರಮದ ವಿವರ:
ಏ.12ರಂದು ಪ್ರವಚನದ ಸಮಾರೋಪ ನಡೆಯಲಿದೆ. ಹೊಸಪೇಟೆ ಕೊಟ್ಟುರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ನಿರಂಜನ ಮಹಾಸ್ವಾಮಿಜಿಗಳು, ಕೊಟ್ಟೂರು ಬಸವಲಿಂಗ ಮಹಾಸ್ವಾಮಿಜಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ.
ಅಭಿನವ ಶಿವಲಿಂಗ ಮಹಾಸ್ವಾಮಿಜಿ ನೇತೃತ್ವ ವಹಿಸುವರು. ಸಿದ್ದರಾಮ ಮಹಾಸ್ವಾಮೀಜಿ, ಅಲ್ಲಮಪ್ರಭುಲಿಂಗೇಶ್ವರ ಮಹಾಸ್ವಾಮೀಜಿ, ಅಭಿನವ ಚನ್ನಬಸವ ಮಹಾಸ್ವಾಮೀಜಿಗಳು, ಪ್ರಭುಕುಮಾರ ಶಿವಾಚಾರ್ಯರು ಭಾಗವಹಿಸಲಿದ್ದಾರೆ.
ಡಾ. ಶಿವಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ಏ. 13ರಂದು ಶಿವದೀಕ್ಷೆಯನ್ನು ಶಿವಲಿಂಗ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ. ಏ. 14ರಂದು ಶಿವಲಿಂಗ ಶಿವಾಚಾರ್ಯರಿಗೆ ಗುರುವಂದನಾ ಸಮಾರಂಭ ಮತ್ತು ರುದ್ರಾಕ್ಷಿ ತುಲಾಭಾರ ನಡೆಯಲಿದೆ.
ಶ್ರೇಷ್ಠ ಸಂತ ಶಿವಲಿಂಗ ಶಿವಾಚಾರ್ಯರು ಗ್ರಂಥ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೇ ಅಂದು ಸಾಯಂಕಾಲ 6 ಗಂಟೆಗೆ ಧರ್ಮಸಭೆ ನಡೆಯಲಿದೆ. ಏ. 15ರಂದು ಉಜ್ಜಯಿನಿ ಜಗದ್ಗುರುಗಳ ಸಾನಿಧ್ಯದಲ್ಲಿ ಹೇಡಗಾಪೂರ ಶಿವಲಿಂಗೇಶ್ವರ ಸಂಸ್ಥಾನ ಮಠಕ್ಕೆ ಕೇದಾರಲಿಂಗ ದೇವರ ಗುರು ಪಟ್ಟಾಧಿಕಾರ ನಡೆಯಲಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


