ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಾಳಿದಾಸ ವಿದ್ಯಾವರ್ಧಕ ಸಂಘ ಮತ್ತು ಜಿಲ್ಲೆಯ ಸಮಸ್ತ ಕುರುಬರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನವೆಂಬರ್ 18ರಂದು ಮಧ್ಯಾಹ್ನ 12:30 ಗಂಟೆಗೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ “ಸಂತಶ್ರೇಷ್ಠ ಕನಕದಾಸರ 537ನೇ ಜಯಂತ್ಯುತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ತುಮಕೂರು ತಾಲ್ಲೂಕು ಡಿ.ಎಂ.ಪಾಳ್ಯ ಶ್ರೀ ಗುರುರೇವಣಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀಶ್ರೀ ಬಿಂಧುಶೇಖರ ಒಡೆಯರ್ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಹಾಗೂ ಸಂಸದ ವಿ.ಸೋಮಣ್ಣ ಘನ ಉಪಸ್ಥಿತರಿರುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಲೇಖಕರಾದ ಎನ್.ಆರ್. ಲಲಿತಾಂಬ ಅವರಿಂದ ಕನಕದಾಸರ ಕುರಿತು ಉಪನ್ಯಾಸ ಏರ್ಪಡಿಸಲಾಗಿದ್ದು, ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9:30 ಗಂಟೆಗೆ ನಗರದ ಶಿರಾಗೇಟ್ ಕನಕವೃತ್ತದಿಂದ ಬಿ.ಜಿ.ಎಸ್ ವೃತ್ತ, ಎಂ.ಜಿ.ರಸ್ತೆ, ಅಶೋಕ ರಸ್ತೆ ಮೂಲಕ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೂ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಸಂತಶ್ರೇಷ್ಠ ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.
10 ಮಂದಿ ಸಾಧಕರಿಗೆ ಸನ್ಮಾನ :
ಜಿಲ್ಲಾಡಳಿತದಿಂದ ಜಯಂತ್ಯುತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮುದಾಯದ 10 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು. ರಂಗಭೂಮಿ ಕ್ಷೇತ್ರದಲ್ಲಿ ನಗರದ ಪ್ರಗತಿ ಬಡಾವಣೆಯ ಟಿ.ಹೆಚ್. ಹನುಮಂತಪ್ಪ, ಲಿಂಗಾಪುರದ ಶಿವಣ್ಣ ಬಿನ್ ಚಿಕ್ಕಣ್ಣ, ಹರಳಕಟ್ಟೆಯ ಚಿಕ್ಕಲಿಂಗಯ್ಯ ಬಿನ್ ಲೇ. ಮುಲ್ಲಾರಯ್ಯ; ಸಮಾಜ ಸೇವೆ ಕ್ಷೇತ್ರದಲ್ಲಿ ತುಮಕೂರು ಮೆಳೆಕೋಟೆಯ ಮಾಜಿ ಸಿಎಂಸಿ ಸದಸ್ಯ ಎಂ.ಪಿ.ರಮೇಶ್ ಹಾಗೂ ವಕೀಲರಾದ ಆರ್. ತಿಪ್ಪೇಸ್ವಾಮಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾಳಮ್ಮನಗುಡಿ ಬೀದಿಯ ಸಿ.ಎಲ್. ರವಿಕುಮಾರ್, ಪಾವಗಡ ತಾಲ್ಲೂಕು ಕಾಳಿದಾಸ ನಗರದ ಮಾಜಿ ಜಿ.ಪಂ. ಸದಸ್ಯ ಪೂಜಾರಿ ಚೌಡಪ್ಪ; ವೈದ್ಯಕೀಯ ಕ್ಷೇತ್ರದಲ್ಲಿ ತುಮಕೂರಿನ ಡಾ: ಶಶಿಧರ್ ಟಿ.ಎಸ್.; ಕ್ರೀಡಾ ಕ್ಷೇತ್ರದಲ್ಲಿ ತುಮಕೂರಿನ ಎಂ.ಪಿ. ಕುಮಾರಸ್ವಾಮಿ(ಪುಟ್ಟಪ್ಪ); ಶಿಕ್ಷಣ ಕ್ಷೇತ್ರದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಡಾ.ಕೆ.ಜಿ.ಪರಶುರಾಮ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q