ಸರಗೂರು: 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಮುಳ್ಳೂರಿಗೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಿಕೊಡುವುದಾಗಿ ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.
ತಾಲೂಕಿನ ಬೆಣ್ಣೆಗೆರೆ, ನಂಜೀಪುರ, ದಡದಹಳ್ಳಿ, ಕಟ್ಟೆಹುಣಸೂರು ಗ್ರಾಮಗಳಲ್ಲಿ ಸರಗೂರು ಕಬಿನಿ ನಾಲಾ ಉಪವಿಭಾಗದಿಂದ ಗ್ರಾಮದ ಪರಿಮಿತಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನೂತನ ತಾಲೂಕು ಸರಗೂರಿನಲ್ಲಿ ಮುಳ್ಳೂರು ಜಿ.ಪಂ.ಕ್ಷೇತ್ರ ವಿಸ್ತಾರದಲ್ಲಿ ತುಂಬಾ ಅಗಲವಾಗಿದ್ದು, ಇಲ್ಲಿನ ಮಕ್ಕಳು ಶೈಕ್ಷಣಿಕವಾಗಿ ತುಂಬಾ ಮುಂದಿದ್ದಾರೆ. ಆದರೆ, ಶಿಕ್ಷಣ ಪಡೆಯಲು ದೂರದ ಸರಗೂರು, ನಂಜನಗೂಡಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಪದವಿಪೂರ್ವ ಕಾಲೇಜು ಮಂಜೂರು ಮಾಡಿಸಿಕೊಡಲಾಗುವುದು ಎಂದು ಅವರು ಹೇಳಿದರು.
ಶಾಸಕನಾಗಿ 4 ವರ್ಷಗಳು ಸಂದಿದ್ದು, 600 ಕೋಟಿ ರೂ.ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಆ ಮೂಲಕ ಮಾದರಿ ತಾಲೂಕು ಮಾಡುವ ಗುರಿ ಹೊಂದಿದ್ದೇನೆ. ನಾನು ಎಂದಿಗೂ ರಾಜಕಾರಣ ಮಾಡಿಲ್ಲ. ಮಾಡುವುದಕ್ಕೂ ಬರೋದಿಲ್ಲಾ. ಜನ ಸೇವೆ ಮಾಡಲು ಬಂದಿದ್ದೇನೆ. ಮುಂದಿನ ಬಾರಿ ಅವಕಾಶ ನೀಡುವ ಮೂಲಕ ಮತ್ತಷ್ಟು ಜನ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ದಡದಹಳ್ಳಿ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿಯೂ ಸಾಕಷ್ಟು ಅನುದಾನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ನೀಡಲಾಗುವುದು. ಗ್ರಾಮದಲ್ಲಿನ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ತಾಲೂಕು ವಿಸ್ತೀರ್ಣ, ಜನ ಸಂಖ್ಯೆಗೆ ಅನುಗುಣವಾಗಿ ಅನುದಾನಗಳು ಬಂದರೆ ತಾಲೂಕು ಅಭಿವೃದ್ಧಿಯಾಗಲಿದೆ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಚಿನ್ನಸ್ವಾಮಿ ಮಾತನಾಡಿ, ಬಸ್ ಸಮಸ್ಯೆ, ಸಾಗುವಳಿ ಪತ್ರ ನೀಡುವ ಬಗ್ಗೆ ಶಾಸಕರ ಗಮನಕ್ಕೆ ತಂದರು. ಇದಕ್ಕೆ ಶಾಸಕರು ಬಸ್ ಡಿಪೋ ಅಧಿಕಾರಿಗಳಿಗೆ ಕರೆ ಮಾಡಿ, ಬಸ್ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.
ಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದಚಾರ್, ಕಲ್ಲಂಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ನೀಲಕಂಠ, ಸದಸ್ಯ, ಕಾಂಗ್ರೆಸ್ ಮುಖಂಡರಾದ ದಡದಹಳ್ಳಿ ಚಿನ್ನಸ್ವಾಮಿ, ಕುಂದೂರು ಮೂರ್ತಿ, ಮಹೇಶ್, ಮೂರ್ತಿ, ಎಇ ಉಷಾ, ಎಇಇ ಮಧುಕುಮಾರ್, ಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಜಯಮ್ಮ, ಸೌಭಾಗ್ಯ ಶಿವಚೆನ್ನಪ್ಪ, ಮಂಜು, ತೆರಣಿಮುಂಟಿ ಗೀರೀಶ್, ಪುಟ್ಟಸ್ವಾಮಿ, ರವಿಕುಮಾರ್, ಸಿದ್ದರಾಜು, ಪಿಡಿಒ ಹನುಮಯ್ಯ, ಲೋಕೇಶ್, ಬೆಟ್ಟೇಗೌಡ, ಶಿವರಾಜಪ್ಪ, ಮಹದೇವಸ್ವಾಮಿ, ಸುಬ್ರಹ್ಮಣ್ಯ ಸೇರಿದಂತೆ ದಡದಹಳ್ಳಿ, ನಂಜೀಪುರ, ಕಟ್ಟೆಹುಣಸೂರು, ಬೆಣ್ಣೆಗೆರೆ ಗ್ರಾಮಸ್ಥರು ಈ ವೇಳೆ ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


