ಮಧುಗಿರಿ: 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಉಪ ವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ, ತಾಲೂಕು ದಂಡಾಧಿಕಾರಿ ಸುರೇಶ್ ಆಚಾರ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಹಲವು ಗಣ್ಯರು ಪಟ್ಟಣದ ಪಾವಗಡ ಸರ್ಕಲ್ ಬಳಿ ಇರುವ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ನಂತರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಾಲ್ನಡಿಗೆ ಮೆರೆವಣಿಗೆ ಮುಖಾಂತರ ಸಾಗಿದರು. ಕ್ರೀಡಾಂಗಣದಲ್ಲಿ ಮೊದಲಿಗೆ ರಾಷ್ಟ್ರಗೀತೆ ಹಾಡುವ ಮೂಲಕ ಉಪವಿಭಾಗಾಧಿಕಾರಿಗಳು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ನಾಡಗೀತೆ ಹಾಡುವ ಮೂಲಕ ಶಾಸಕರು ನಾಡ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಪವಿಭಾಗ ಅಧಿಕಾರಿ ಸೋಮಪ್ಪ ಕಡಕೋಳ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ, ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್ ಎಂದು ತನ್ನ ತಾಯಿನಾಡಿನ ಬಗ್ಗೆ ಇರುವ ಪ್ರೀತಿಯನ್ನು ಮಹಾಕವಿ ಪಂಪ ವ್ಯಕ್ತಪಡಿಸಿರುತ್ತಾರೆ ಎಂದರು.
ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು ಎಂಬ ನಾಡಗೀತೆ ರಚಿಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ ನಾಡಕವಿ ಹೂಯಿಲಗೋಳ ನಾರಾಯಣರಾಯರು, ಎಲ್ಲಾದರು ಇರು ಎಂತಾದರು ಇರುಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ಗೋವಿನ ಓ ಮುದ್ದಿನ ಕರುಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಸಾರಿದ ಕುವೆಂಪು ರವರ ಸಾಲುಗಳು, ಇನ್ನೂ ಅನೇಕ ಕನ್ನಡ ಸಾಹಿತಿ ಸಾಲುಗಳು ಕನ್ನಡ ಕಂಪನ್ನು ಎತ್ತಿ ಹಿಡಿದಿವೆ ಎಂದು ತಿಳಿಸಿದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಕರ್ನಾಟಕದ ಜನತೆಗೆ ನವೆಂಬರ್ 1 ಹೆಮ್ಮೆಯ ದಿನವಾಗಿದೆ. ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಇಡೀ ಕರ್ನಾಟಕದ ಪ್ರತಿ ಮನೆಯಲ್ಲೂ ಹಬ್ಬದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ. ನಮ್ಮ ಕನ್ನಡ ನಾಡು ಶ್ರೀಗಂಧದ ಬೀಡು. ಕರುನಾಡು, ಕನ್ನಡ ನಾಡು, ಕನ್ನಡಾಂಭೆಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳು ಗೂಡು, ಪವಿತ್ರ ಕಾವೇರಿ, ತುಂಗಭದ್ರೆ ನದಿಗಳು ಹರಿಯುವ, ಸಾಧು-ಸಂತರು, ದಾಸರು, ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ ಈ ನಾಡಿಗಿದೆ ಎಂದು ತಿಳಿಸಿದರು.
ಪ್ರಧಾನ ಭಾಷಣಕರಾದ ಡಾ.ಅಮರಾವತಿ ದೇಹಚಾರ್ ಮಾತನಾಡಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಡೀ ಕರ್ನಾಟಕ ರಾಜ್ಯಾದ್ಯಂತ ಅದ್ಧೂರಿಯಾಗಿ ವಿಜೃಂಭಣೆಯಿಂದ ಈ ದಿನ ಕನ್ನಡ ನಾಡ ಹಬ್ಬ ಆಚರಿಸಲಾಗುತ್ತಿದೆ. ಕನ್ನಡ ಭಾಷೆಯನ್ನು ನಾವು ಎಲ್ಲಾ ವರ್ಗದಲ್ಲಿಯೂ ಸಹ ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.
ಎಸ್.ಎಂ.ಆಂಗ್ಲಶಾಲೆ, ಕಾರ್ಡಿಯಲ್ ಆಂಗ್ಲ ಶಾಲೆ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಎಂ.ಆರ್.ಜಗನ್ನಾಥ್, ಚಂದ್ರಶೇಖರ್ ಬಾಬು, ಗಂಗರಾಜು, ನಾಣಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಹಾಗೂ ಜನಸಾಮಾನ್ಯರು ಇದ್ದರು.
ವರದಿ : ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


