ತುರುವೇಕೆರೆ: ಸರ್ಕಾರ ರಾಜ್ಯದ ನೌಕರರನ್ನು ಸತಾಯಿಸದೇ 7ನೇ ವೇತನ ಆಯೋಗವನ್ನು ಶೀಘ್ರವೇ ಜಾರಿ ಮಾಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.
ಪಟ್ಟಣದಲ್ಲಿ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘವು ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ಅಭಿನಂಧನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯಾವುದೇ ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ವಪೂರ್ಣವಾದ ಕೆಲಸವನ್ನು ನೌಕರರು, ಅಧಿಕಾರಿಗಳು ಮಾಡುತ್ತಾರೆ. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದರೆ ಆಯಾ ಸರ್ಕಾರಗಳಿಗೆ ಒಳ್ಳೆಯ ಜನಾಭಿಪ್ರಾಯ ಬರುತ್ತದೆ.ಕ್ಷೇತ್ರದಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಸಬ್ ಇನ್ಸ್ಪೆಕ್ಟರ್ ಈ ಮೂವರು ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದರೆ ಅಲ್ಲಿನ ಶಾಸಕರಿಗೆ ಒಳ್ಳೆಯ ಹೆಸರು ಬರುತ್ತದೆ. ಅಧಿಕಾರಿಗಳು, ನೌಕರರನ್ನು ಬೈಯುವುದರಲ್ಲಿ ಅರ್ಥವಿಲ್ಲ. ಏನೇ ಸಮಸ್ಯೆಗಳಿಲ್ಲದರೂ ನನ್ನ ಬಳಿ ಬನ್ನಿ ಕೂತು ಚರ್ಚಿಸಿ ಎಂದರು.
ನಾನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿದ್ದಾಗ ಇಲ್ಲಿನ ಕಟ್ಟಡಕ್ಕೆ ತಳಪಾಯ ಹಾಕಲಾಗಿತ್ತು. ನಾನು ಅಧ್ಯಕ್ಷನಾಗಿದ್ದಾಗ ಕೇಂದ್ರದ ಮಾದರಿಯ ಡಿ.ಎ ಮತ್ತು ಸ್ಟ್ಯಾಗ್ನೆಂಟ್ ಅನ್ನು ರಾಜ್ಯದ ನೌಕರರಿಗೆ ಕೊಡಿಸಲು ಸಾಕಷ್ಟು ಹೋರಾಟ ಮಾಡಿದ್ದೇನೆಂದು ಹಳೆ ನೆನಪುಗಳನ್ನು ಬಿಚ್ಚಿಟ್ಟರು.
ರಾಜಕಾರಣ ಬರುತ್ತದೆ ಹೋಗುತ್ತದೆ. ಆದರೆ ನೌಕರರ ಸಂಘಟನೆಯನ್ನು ಕೈ ಬಿಡದೆ ಒಗ್ಗಟ್ಟಿನಿಂದ ಇದ್ದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ ಹಿಂದೆ ಏನು ನಡೀತು ಅನ್ನೋದು ಬೇಡ. ಮುಂದೆ ತಾಲ್ಲೂಕಿನ ಜನತೆಗೆ ಏನೇನು ಮಾಡಬೇಕು ಅನ್ನುವುದನ್ನು ಮಾತ್ರ ಚಿಂತಿಸೋಣ.
ನಾನು ನೌಕರರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ತೊಂದರೆ ಕೊಡುವ ಸನ್ನಿವೇಶವನ್ನು ನಿರ್ಮಾಣ ಮಾಡಿಕೊಳ್ಳಬೇಡಿ. ಎಲ್ಲ ನೌಕರರೂ ಚನ್ನಾಗಿ ಕೆಲಸ ಮಾಡಿ ಕ್ಷೇತ್ರದ ಅಭವೃದ್ದಿ ಮಾಡೋಣ ಎಂದು ನೌಕರರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜುಮುನಿಯೂರು, ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ದೊಡ್ಡಾಘಟ್ಟ ಚಂದ್ರೇಶ್, ಗ್ರೇಟ್-2 ತಹಶೀಲ್ದಾರ್ ಡಿ.ಆರ್.ಸುನಿಲ್ ಕುಮಾರ್, ಸರ್ವೇ ಇಲಾಖೆ ನಟೇಶ್, ಬಿಸಿಎಂ ಇಲಾಖೆಯ ಭಾನುಮತಿ, ಕೃಷಿ ಇಲಾಖೆ ಗಿರೀಶ್, ಆಹಾರ ಇಲಾಖೆಯ ಕೃಷ್ಣೇಗೌಡ, ತೋಟಗಾರಿಕೆ ಶಿವಪ್ರಸಾದ್, ಜಗದೀಶ್, ನಂಜಪ್ಪ, ಗ್ರಾಮಲೆಕ್ಕಾಧಿಕಾರಿ ರಮೇಶ್ ಇನ್ನಿತರರು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy