ಭಾರತ್ ಗೌರವ್ ವಿಶೇಷ ರೈಲಿನ ಸುಮಾರು 80 ಪ್ರಯಾಣಿಕರಿಗೆ ಆಹಾರ ವಿಷವಾಗಿದೆ. ಚೆನ್ನೈನಿಂದ ಹೊರಟಿದ್ದ ಪ್ರಯಾಣಿಕರು ಹೊಟ್ಟೆನೋವು ಮತ್ತು ಬೇಧಿಯಿಂದ ಬಳಲುತ್ತಿದ್ದರು. ವೈದ್ಯಕೀಯ ನೆರವು ನೀಡಲು ರೈಲ್ವೆ ಆಸ್ಪತ್ರೆಯ ವೈದ್ಯರು, ರೂಬಿ ಹಾಲ್ ನ ವೈದ್ಯರು ಮತ್ತು ಇತರ ರೈಲ್ವೆ ಅಧಿಕಾರಿಗಳನ್ನು ಪುಣೆ ನಿಲ್ದಾಣಕ್ಕೆ ಕಳುಹಿಸಲಾಗಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಪಿಆರ್ಒ ರಾಮದಾಸ್ ಭಿಸೆ ತಿಳಿಸಿದ್ದಾರೆ.
ಸುಮಾರು 1,000 ಪ್ರಯಾಣಿಕರಿದ್ದರು. ಅನೇಕ ಪ್ರಯಾಣಿಕರು ತಲೆತಿರುಗುವಿಕೆ, ಹೊಟ್ಟೆ ನೋವು, ವಾಂತಿ ಮತ್ತು ಭೇದಿ ಅನುಭವಿಸಿದರು. ರೈಲು ಪುಣೆ ನಿಲ್ದಾಣಕ್ಕೆ ಬರುವಷ್ಟರಲ್ಲಿ ಈ ಘಟನೆ ನಡೆದಿದೆ. ಯಾರೂ ಆಸ್ಪತ್ರೆಗೆ ದಾಖಲಾಗಬೇಕಾಗಿಲ್ಲ. ಹೊರಡುವ ಮುನ್ನ ರೈಲನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನಲ್ಲಿ ಅಡುಗೆ ಕೋಣೆ ಇರಲಿಲ್ಲ. ಸೋಲಾಪುರದಿಂದ ಸುಮಾರು 180 ಕಿಮೀ ದೂರದಲ್ಲಿರುವ ವಾಡಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಊಟ ಸೇವಿಸಿದ್ದಾರೆ ಎಂದು ವರದಿಯಾಗಿದೆ. ರೈಲ್ವೆ ಅಧಿಕಾರಿಗಳು ಆಹಾರವನ್ನು ನೀಡಿಲ್ಲ ಮತ್ತು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


