ಬಳ್ಳಾರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೇ.99 ರಷ್ಟು ಕಠಿಣ ಪರಿಶ್ರಮ, ಕೇವಲ ಶೇ.01 ರಷ್ಟು ಅದೃಷ್ಟದಿಂದ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ರಾಜೇಶ್ ಎನ್. ಹೊಸಮನೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬಳ್ಳಾರಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಶಾರೀರಿಕ, ಮಾನಸಿಕವಾಗಿ ಸದೃಢರಾಗುವ ಮೂಲಕ ಸತತ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಯ ಅಮೂಲ್ಯವಾಗಿದ್ದು, ಶಾಲಾ–ಕಾಲೇಜು ಮುಗಿದ ನಂತರವೇ ನಿಜವಾದ ಜೀವನ ಆರಂಭಗೊಳ್ಳುತ್ತದೆ. ಸಾಧಕರ ಜೀವನ ಶೈಲಿಗಳ ಮೂಲಕ ಪ್ರೇರಿತರಾಗಿ, ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಾಧಕರಾಗಬೇಕು ಎಂದು ಕಿವಿಮಾತು ಹೇಳಿದರು.
ನಿಲಯ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯಾವಕಾಶ ಸಿಗಲಿದೆ. ಪಠ್ಯದ ಜೊತೆಗೆ ಸರ್ಕಾರಿ ಹುದ್ದೆಗಳ ನಿರ್ದಿಷ್ಟ ಪಠ್ಯಕ್ರಮಗಳ ಅಧ್ಯಯನ, ಗುಂಪು ಚರ್ಚೆ ಹಾಗೂ ಇತರೆ ಅಧ್ಯಯನ ನಡೆಸಬೇಕು ಎಂದರು.
ಪದವಿ ನಂತರ ಸಾಕಷ್ಟು ಅವಕಾಶದ ಬಾಗಿಲು ತೆರೆಯುತ್ತವೆ. ಒಳ್ಳೆಯದ್ದನ್ನೇ ಆಯ್ಕೆ ಮಾಡಿಕೊಂಡು ಅವಕಾಶ ಉಪಯೋಗಿಸಿಕೊಳ್ಳಬೇಕು. ಕೇವಲ ಹಣ ಮಾಡಲು ಸರ್ಕಾರಿ ಹುದ್ದೆ ಪಡೆಯಬಾರದು ಸಾಮಾಜಿಕ ಸೇವೆ, ದೇಶಕ್ಕೆ ಕೊಡುಗೆ ನೀಡಬೇಕೆಂಬ ಪ್ರಾಮಾಣಿಕತೆ, ಸ್ಥಿರತೆ ಹೊಂದಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಅವರು ಮಾತನಾಡಿ, ಜೀವನವೇ ಒಂದು ಸ್ಪರ್ಧೆ. ಆ ಸ್ಪರ್ಧೆಯಲ್ಲಿ ನಾವೆಲ್ಲಾ ಸ್ಪರ್ಧಾ ಆಕಾಂಕ್ಷಿಗಳು. ಜೀವನದಲ್ಲಿ ನಾವು ಏನಾಗಬೇಕು ಎಂಬುದನ್ನು ನಮ್ಮ ಸಾಮರ್ಥ್ಯದ ಮೂಲಕ ದೃಢ ನಿರ್ಧಾರದೊಂದಿಗೆ ಶ್ರದ್ಧೆಯಿಂದ ಅಭ್ಯಾಸ ಮಾಡಿದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದ ಮೂಲಕ ಕಷ್ಟದ ದಿನಗಳನ್ನು ಎದುರಿಸಿದಾಗ ಮಾತ್ರ ಮುಂದೆ ಒಳ್ಳೆಯ ಸುಖದ ದಿನಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಶ್ರೀ ಮೇಧಾ ಡಿಗ್ರಿ ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥ ಹಾಗೂ ಜೆಸಿಐ ಇಂಡಿಯಾದ ರಾಷ್ಟ್ರೀಯ ತರಬೇತುದಾರ, ಮಕ್ಕಳ ಸಲಹೆಗಾರ ಜೆ.ಸಿ.ಮಂಜುನಾಥ ಬಳ್ಳೂಳ್ಳಿ, ಬಳ್ಳಾರಿಯ ಭೀಮರಾವ್ ಐ.ಎ.ಎಸ್ ಮತ್ತು ಕೆ.ಎ.ಎಸ್ ಸ್ಟಡಿ ಸರ್ಕಲ್ ನ ನಿರ್ದೇಶಕ ಶೇಖರಪ್ಪ ಮತ್ತು ಸಂಡೂರು ಎಸ್.ಇ.ಎಸ್ ಶಿಕ್ಷಣ ಸಂಸ್ಥೆಯ ಡಾ.ಜಗದೀಶ್ ಬಸಾಪುರ ಅವರು ಸ್ಪರ್ಧಾತ್ಮಕ ಪರೀಕ್ಷೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವಿನೋದ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ ಎ.ಕೆ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ- ಸಿಬ್ಬಂದಿ, ನಿಲಯ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


