ವಿದೇಶಿ ವಿನಿಮಯ ಸಂಕಷ್ಟ ಮತ್ತು ಮುದ್ರಣ ಕಾಗದದ ದರ ಏರಿಕೆಯಿಂದ ಜರ್ಝರಿತವಾದ ಸುದ್ದಿ ಸಂಸ್ಥೆಗಳ ಪೈಕಿ ಎರಡು ಪ್ರಮುಖ ಪತ್ರಿಕೆಗಳು ತಮ್ಮ ದೈನಂದಿನ ಸಂಚಿಕೆ ಮುದ್ರಣವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿವೆ.
ದ್ವೀಪ ರಾಷ್ಟ್ರ ಶ್ರೀಲಂಕ ಹಿಂದೆಂದು ಕಾಣದಷ್ಟು ವಿದೇಶಿ ವಿನಿಮಯ ಕೊರತೆಯನ್ನು ಅನುಭವಿಸುತ್ತಿದೆ. ಇದರಿಂದಾಗಿ ಮುದ್ರಣ ಕಾಗದ ಆಮದು ದರ ಏರಿಕೆ ಏರಿಕೆಯಾಗಿದ್ದು, ಕೊರತೆಯು ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ದಿ ಐಲ್ಯಾಂಡ್ ಇಂಗ್ಲಿಷ್ ದೈನಿಕ ಮತ್ತು ಅದರ ಸಹೋದರ ಸಂಸ್ಥೆ ಸಿಂಹಳಿ ಭಾಷೆಯ ದಿವಾಯಿನಾ ಮುಂದಿನ ಆದೇಶದವರೆಗೂ ಸಂಚಿಕೆ ಮುದ್ರಣವನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿವೆ.
ಈ ಪ್ರಕಟಣೆಗಳ ಮಾತೃ ಸಂಸ್ಥೆ ಉಪಾಲಿ ನ್ಯೂಸ್ ಪೆಪರ್ ಲಿಮಿಟೆಡ್, ಶನಿವಾರ ತಮ್ಮ ಓದುಗರ ಬಳಿ ವಿಷಾದ ವ್ಯಕ್ತ ಪಡಿಸಿದ್ದು, ಶನಿವಾರದಿಂದ ಮುಂದಿನ ಸೂಚನೆಯವರೆಗೆ ಮುದ್ರಣವನ್ನು ನಿಲ್ಲಿಸುತ್ತಿದ್ದೇವೆ ಎಂದು ತಿಳಿಸಿದೆ.
ಪ್ರವಾಸೋದ್ಯಮ ಆಧಾರಿತ ಆದಾಯವನ್ನೇ ಅವಲಂಬಿಸಿದ ಶ್ರೀಲಂಕ ಕೋವಿಡ್ ನಿಂದಾಗಿ ಪ್ರವಾಸಿಗರ ಕೊರತೆಯಿಂದ ತೀವ್ರ ಆರ್ಥಿಕ ಹಿನ್ನೆಡೆ ಅನುಭವಿಸುತ್ತಿದೆ. ಹಿಂದೆಂದು ಕಾಣದಷ್ಟು ವಿದೇಶಿ ವಿನಿಮಯದ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ದೇಶದಲ್ಲಿ ಭಾರೀ ಬೆಲೆ ಏರಿಕೆಯಾಗಿದೆ, ತೈಲ ಬೆಲೆಗಳು ಕೈಗೆಟುಕದ ಮಟ್ಟಕ್ಕೆ ತಲುಪಿವೆ.
ಡಾಲರ್ ಎದುರು ಶ್ರೀಲಂಕಾ ವಿನಿಮಯ ಕುಸಿದಿದ್ದರಿಂದ ವಿದೇಶಿ ವಿನಿಮಯ ದುಗಡಕ್ಕೆ ಒಳಗಾಗಿ, ಆಮದು ಮೇಲೆ ನಿರ್ಬಂಧಗಳು ಅನಿವಾರ್ಯವಾಗಿವೆ. ತನ್ಮೂಲಕ ಪೆಟ್ರೋಲ್, ಡಿಸೇಲ್‍ಗಾಗಿ ಜನ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಅಗತ್ಯ ವಸ್ತುಗಳ ಕೊರತೆ ಮತ್ತು ಬೆಲೆ ಏರಿಕೆ ಜನ ಜೀವನವನ್ನು ಘಾಸಿ ಮಾಡಿತ್ತು.
ಭಾರತ ಸರ್ಕಾರ ಒಂದು ಬಿಲಯನ್ ಡಾಲರ್ ವಿನಿಮಯವನ್ನು ಸಾಲದ ರೂಪದಲ್ಲಿ ಒದಗಿಸಿದೆ. ಪೆಟ್ರೋಲಿಯಂ ಉತ್ಪನ್ನಗಳ ಖರೀದಿದೆ 500 ಮಿಲಿಯನ್ ಡಾಲರ್ ಸಾಲ ರೂಪದ ನೆರವನ್ನು ಘೋಷಿಸಿದೆ. ಈಗ ಉದ್ಯಮದ ಮೇಲೂ ಪರಿಣಾಮ ಬೀರಿರುವ ಆರ್ಥಿಕ ಹಿಂಜರಿಗೆ ಮುದ್ರಣಾಲಯಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
1981ರಿಂದ ನಿರಂತರವಾಗಿ ಮುದ್ರಣವಾಗುತ್ತಿದ್ದ ದಿ ಐಲ್ಯಾಂಡ್ ಮತ್ತು ದಿವಾಯಿನಾ ಪತ್ರಿಕೆಗಳು ಮುದ್ರಣವನ್ನು ನಿಲ್ಲಿಸಿ ಇ-ಪೆಪರ್ ಮಾದರಿಯಲ್ಲಿ ಓದುಗರಿಗೆ ತಲುಪುತ್ತಿದೆ.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5