ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾಜ್ ಟೈಟಾನ್ಸ್ ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಜರ್ನಿ ಆರಂಭಿಸಿದೆ. ರಾಹುಲ್ ತೇವಾಟಿಯಾ ಅಬ್ಬರದ ಬ್ಯಾಟಿಂಗ್ ಸಹಾಯದಿಂದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 4ನೇ ಪಂದ್ಯದಲ್ಲಿ ಗುಜರಾತ್ ಚೊಚ್ಚಲ ಗೆಲುವಿನ ನಗೆ ಬೀರಿತು.
ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಸುಲಭ ಗೆಲುವಿನ ಗುರಿ ಬೆನ್ನತ್ತಿದ ಗುಜರಾತ್ ಆರಂಭದಲ್ಲಿ ಆಘಾತ ಅನುಭವಿಸಿದರೂ ನಂತರ ಚೇತರಿಸಿಕೊಂಡು ಜಯಭೇರಿ ಭಾರಿಸಿತು.
ಟಾಸ್ ಸೋತರೂ ಲಕ್ನೋ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಮೊಹಮ್ಮದ್ ಶಮಿ ಎಸೆದ ಮೊದಲ ಎಸೆತದಲ್ಲೇ ಕೆ.ಎಲ್.ರಾಹುಲ್ ಪೆವಿಲಿಯನ್ ಸೇರಿದರು. 3ನೇ ಓವರ್ನ 2ನೇ ಎಸೆತದಲ್ಲಿ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್(7) ಕ್ಲೀನ್ ಬೌಲ್ಡ್ ಆದರು. ರಾಹುಲ್ ಬಳಿಕ ಬಂದ ಹ್ಯಾಮಿಲ್ಟನ್ ಲೂಯಿಸ್(10) ಶಮಿ ಎಸೆತದಲ್ಲಿ ಸಿಕ್ಸರ್ ಭಾರಿಸುವ ಯತ್ನದಲ್ಲಿ ಔಟಾದರು.
ಬಳಿಕ ಬಂದ ದೀಪಕ್ ಹೂಡಾ(55) ಹಾಗೂ ಆಯುಶ್(54) ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿ ಅಟ್ಟುವ ಮೂಲಕ ಸ್ಫೋಟಕ ಆಟ ಪ್ರದರ್ಶಿಸಿದರು. ಕೊನೆಯಲ್ಲಿ ಕೃನಾಲ್ ಪಾಂಡ್ಯ (21) ಭರ್ಜರಿ ಆಟವಾಡಿದರು.
ಇನ್ನು ಸುಲಭ ಗೆಲುವಿನ ಗುರಿ ಬೆನ್ನತ್ತಿದ ಗುಜರಾತ್ ಪರ ರಾಹುಲ್ ತೇವಾಟಿಯಾ ಭರ್ಜರಿ ಬ್ಯಾಟಿಂಗ್ ನಡೆಸಿದರು. 24 ಎಸೆಗಳಲ್ಲಿ ಅವರು 2 ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದಕ್ಕೂ ಮುನ್ನ ಮ್ಯಾಥ್ಯೂ ವೇಡ್(30), ಹಾರ್ದಿಕ್ ಪಾಂಡ್ಯ(33) ಡೆವಿಡ್ ಮಿಲ್ಲರ್(30) ಮತ್ತು ಅಭಿನವ್ ಮನೋಹರ್ ಔಟಾಗದೆ 15 ರನ್ ಗಳಿಸಿದರು. ಅಂತಿಮವಾಗಿ ಗುಜರಾತ್ 19.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5