ಕೇಂದ್ರಸರ್ಕಾರಿ ಕಚೇರಿಗಳ ಬಹು ಕಾರ್ಯ ಸಿಬ್ಬಂದಿ (ಎಂಟಿಸಿ) ನೇಮಕಾತಿಯಲ್ಲಿ ಕನ್ನಡಿಗರಿಗೆ ವಂಚನೆಯಾಗುತ್ತಿದೆ ಎಂದು ಕನ್ನಡ ಗೆಳೆಯರ ಬಳಗ ಆರೋಪಿಸಿದೆ.
ಕೋರಮಂಗಲದಲ್ಲಿರುವ ಕೇಂದ್ರೀಯ ಸದನಕ್ಕೆ ಇತ್ತೀಚೆಗೆ ಬಂದಿರುವ ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿ ಬಾಲಕ ಮತ್ತು ಎಂಟಿಎಸ್ (ಬಹು ಕಾರ್ಯ ಸಿಬ್ಬಂದಿ) ಹುದ್ದೆಗೆ ಬೆಂಗಳೂರಿನ ಉದ್ಯೋಗ ವಿನಿಮಯ ಕೇಂದ್ರದಿಂದ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಂಡು ಆಯ್ಕೆ ಮಾಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಇತರೆ ಇಲಾಖೆಯವರು ಈ ನ್ಯಾಯವಾದ ಮಾರ್ಗ ಅನುಸರಿಸದೆ, ಸಿಬ್ಬಂದಿ ಆಯ್ಕೆ ಆಯೋಗದ (ಎಸ್‍ಎಸ್‍ಸಿ) ಮೂಲಕ ಆಯ್ಕೆ ಮಾಡಿ ಕನ್ನಡಿಗರಿಗೆ ಈ ಕೆಲಸ ಸಿಗದ0ತೆ ಮಾಡುತ್ತಿದ್ದಾರೆ. ವಾಸ್ತವವಾಗಿ ರೂಡಿಗತವಾಗಿ ಗುರುತಿಸುವ ಜವಾನ, ಇಲಾಖೆ ಸಹಾಯಕ ಹುದ್ದೆಯನ್ನೇ ಬಹುಕಾರ್ಯ ಸಿಬ್ಬಂದಿ (ಮಲ್ಟಿ ಟಾಸ್ಕಿಂಗ್ ಸ್ಟಾಪ್) ಎಂದು ಹೆಸರಿಸಿ, ಲಿಖಿತ ಪರೀಕ್ಷೆ ನಡೆಸುವ ಮೂಲಕ ಪ್ರತಿ ವರ್ಷ ಕನಿಷ್ಠ 500 ಕನ್ನಡಿಗರನ್ನು ಉದ್ಯೋಗ ವಂಚಿತರಾಗಿ ಮಾಡುತ್ತಿದ್ದಾರೆ.
ನೀರು ತರುವುದಕ್ಕೆ, ಕಚೇರಿ ಶುಚಿಗೊಳಿಸುವುದಕ್ಕೆ ಪತ್ರ ವಿತರಣೆ ಮಾಡುವಂತಹ ಕೆಲಸಗಳಿಗೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪರೀಕ್ಷೆ ನಡೆಸಿ, ಕನ್ನಡಿಗರನ್ನು ವಂಚಿಸುತ್ತಿರುವುದನ್ನು ಕನ್ನಡ ಗೆಳೆಯರ ಬಳಗ ತೀವ್ರವಾಗಿ ಖಂಡಿಸುತ್ತದೆ. ಬೆಂಗಳೂರಿನ ಮಲ್ಲೇಶ್ವರದ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ 14 ಎಂಟಿಎಸ್ ಹುದ್ದೆಗಳನ್ನು ತುಂಬಲು ಇದೇ ಏಪ್ರಿಲ್ 24ರಂದು ಎಂಟಿಎಸ್ (24-04-2012) ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ.
ಇದು ಸ್ಪಷ್ಟವಾಗಿ ಸ್ಥಳೀಯ ಕನ್ನಡಿಗರನ್ನು ಕಡೆಗಣಿಸಿ ತಮಗೆ ಬೇಕಾದ ಪರ ರಾಜ್ಯದವರನ್ನು ತರುವ ಹುನ್ನಾರವಾಗಿದೆ. ಮುಖ್ಯಮಂತ್ರಿಗಳು ನೇರವಾಗಿ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವರೊಡನೆ ಮಾತನಾಡಿ, ಎಂಟಿಎಸ್ ಹುದ್ದೆಗಳಿಗೆ ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರಗಳಿಂದಲೇ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಳ್ಳುವಂತೆ ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಸರ್ಕಾರದ ಕಚೇರಿ, ಸಂಸ್ಥೆಗಳಿಗೆ ಆದೇಶ ನೀಡುವಂತೆ ಕನ್ನಡ ಗೆಳೆಯರ ಬಳಗೆ ಒತ್ತಾಯಿಸಿದೆ.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5