ಎಚ್.ಡಿ.ಕೋಟೆ: ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಎಪ್ರಿಲ್ 21 ಗುರುವಾರ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ತಾಲ್ಲೂಕು ಆರೋಗ್ಯಧಿಕಾರಿ ಟಿ. ರವಿಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಸ್ವಾತಂತ್ರೋತ್ಸವದ 75ನೇ ಅಮೃತ ಮಹೋತ್ಸವದ ಅಂಗವಾಗಿ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ 50 ನುರಿತ ವೈದ್ಯರುಗಳು, ಸುಮಾರು 450 ಸಿಬ್ಬಂದಿಗಳು ತಪಾಸಣಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಸಂಸದ ಶ್ರೀನಿವಾಸ್ ಪ್ರಸಾದ್, ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಂತಾನೋತ್ಪತ್ತಿ, ಮಕ್ಕಳ ಆರೋಗ್ಯ, ಹದಿಹರೆಯದವರ ಸಮಗ್ರ ಆರೋಗ್ಯ, ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆ, ಸಾಂಕ್ರಾಮಿಕ ರೋಗಗಳ ಚಿಕಿತ್ಸೆ, ಸಾಂಕ್ರಾಮಿಕ ರೋಗಗಳ ಚಿಕಿತ್ಸೆ, ಸಾಮಾನ್ಯ ಸೇವೆಗಳು, ಭಾರತೀಯ ಚಿಕಿತ್ಸಾ ಪದ್ಧತಿ, ಸರ್ಕಾರದಿಂದ ಸಿಗುವ ಪ್ರತಿಯೊಂದು ಸೌಲಭ್ಯಗಳು, ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ, ಹರಿವು ಮೂಡಿಸುವುದು, ತಪಾಸಣೆ ನಡೆಸಿ ಔಷಧಿಗಳನ್ನು ನೀಡಲಾಗುವುದು ಎಂದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಕಾರ್ಯಕ್ರಮಗಳ ಉಸ್ತುವಾರಿ ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಈ ಆರೋಗ್ಯ ಮೇಳ ಬಹಳ ಉಪಯುಕ್ತವಾಗಿದೆ, ನಿರ್ಲಕ್ಷಿಸದೆ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸೋಮಣ್ಣ, ಪುರಸಭೆಯ ಅಧ್ಯಕ್ಷ ಶಿವಮ್ಮ ಚಾಕಳ್ಳಿಕೃಷ್ಣ ಮಾಜಿ ಅಧ್ಯಕ್ಷೆ ಸರೋಜಮ್ಮ, ಅನಿತಾ ನಿಂಗನಾಯ್ಕ ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


