ವಿಶೇಷ ವರದಿ:
ತುಮಕೂರು: ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರ ಹತ್ಯೆ ತುಮಕೂರು ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಘಟನೆಯ ನಂತರ ಗ್ರಾಮದಲ್ಲಿ ಇದೀಗ ಮೌನ ಆವರಿಸಿದ್ದು, ಸ್ಥಳೀಯ ಜನರು ಭೀತಿಗೊಂಡಿದ್ದಾರೆ.
ಪೆದ್ದನಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ಪಿ.ಎಂ.ಗಿರೀಶ್ (32), ಮಂಚಲದೊರೆ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಗಿರೀಶ್ (33) ಕೊಲೆಯಾದವರು. ಇದೇ ಗ್ರಾಮದ ಲಿಂಗಾಯತ ಸಮುದಾಯಕ್ಕೆ ಸೇರಿದ ನಂದೀಶ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಶುಕ್ರವಾರ ಬೆಳಗ್ಗೆ ಗ್ರಾಮದ ನೀರಿನ ಕಟ್ಟೆಯ ಬಳಿಯಲ್ಲಿ ಈ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ. ದಾರಿಹೋಕರು ನೀಡಿದ ಮಾಹಿತಿಯಿಂದಾಗಿ ಕುಟುಂಬಸ್ಥರಿಗೆ ವಿಚಾರ ತಿಳಿದು ಬಂದಿತ್ತು. ಇಬ್ಬರ ದೇಹದ ಮೇಲೆಯೂ ಗಂಭೀರವಾದ ಗಾಯಗಳಿದ್ದು, ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಶ್ವಾನದಳ ಕರೆಸಲಾಗಿದ್ದು. ಶ್ವಾನಗಳು ಹಲವು ಮನೆಗಳ ಬಳಿಗೆ ಹೋಗಿದ್ದವು. ಇದರಿಂದ ಆತಂಕಗೊಂಡ ಪೆದ್ದನಹಳ್ಳಿಯ ಕೆಲವು ಪುರುಷರು ಮನೆಗಳನ್ನು ತೊರೆದಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಮೌನ ಆವರಿಸಿದೆ.
ಕೃಷಿ ಪಂಪ್ ಸೆಟ್ ನ ಕೇಬಲ್ ಕಳವು ಮಾಡಲು ಹೋಗಿದ್ದ ಸಂದರ್ಭದಲ್ಲಿ ಜನರ ಕೈಗೆ ಸಿಕ್ಕಿ ಬಿದ್ದು ಹತ್ಯೆ ಮಾಡಲಾಗಿದೆ ಎನ್ನುವ ಗುಸುಗುಸು ಮಾತುಗಳು ಕೂಡ ಕೇಳಿ ಬಂದಿದೆ. ಘಟನೆಯ ಸಂದರ್ಭದಲ್ಲಿ ಮೃತದ ಜೊತೆಗಿದ್ದ ಇನ್ನಿಬ್ಬರು ಓಡಿಹೋಗಿದ್ದರು ಎಂದೂ ಹೇಳಲಾಗುತ್ತಿದೆ.
ಘಟನೆಯ ಹಿಂದಿನ ರಾತ್ರಿ ಆರೋಪಿ ನಂದೀಶ್, ಪೆದ್ದನಹಳ್ಳಿಯ ಪಿ.ಎಂ.ಗಿರೀಶ್ ಮನೆಗೆ ಬಂದು ಅವರನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ ಶುಕ್ರವಾರ ಬೆಳಿಗ್ಗೆ ಗ್ರಾಮದ ನೀರಿನ ಕಟ್ಟೆಯಲ್ಲಿ ಗಿರೀಶ್ ಶವ ಪತ್ತೆಯಾಗಿತ್ತು.
ಪೆದ್ದನಹಳ್ಳಿಯ ಗಿರೀಶ್ ಸಹೋದರ ಪಿ.ಎಂ.ಶ್ರೀಧರ್ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದು, ನಂದೀಶ್ ಹಾಗೂ ಇತರರು ಸೇರಿಕೊಂಡು ಈ ಇಬ್ಬರನ್ನೂ ಕೊಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಪರಿಶಿಷ್ಟ ಜಾತಿಗೆ ಸೇರಿದ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿ ಕಳ್ಳತನದ ಕಥೆ ಕಟ್ಟಲಾಗ್ತಿದೆ ಎನ್ನುವ ಅನುಮಾನಗಳು ಕೂಡ ಕೇಳಿ ಬಂದಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿದೆಯೇ ಎನ್ನುವ ಅನುಮಾನಗಳು ಶುರುವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5