ಚಿತ್ರದುರ್ಗ: ಆರೋಗ್ಯವಂತ ಕುಟುಂಬದಿಂದ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ಯಾವ ಕುಟುಂಬದಲ್ಲಿ ಎಲ್ಲರ ಆರೋಗ್ಯ ಚೆನ್ನಾಗಿರುತ್ತಾದೇಯೋ, ಆ ಕುಟುಂಬ ಉತ್ತಮ ಅಭಿವೃದ್ದಿ ಕಾಣಲು ಸಾಧ್ಯ ಎಂದು ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಚಿತದುರ್ಗ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಛೇರಿ, ಸಾರ್ವಜನಿಕ ಆಸ್ಪತ್ರೆ ಹಿರಿಯೂರು ಹಾಗು ಈಸ್ಟ್ ಪಾಯಿಂಟ್ ಆಸ್ಪತ್ರೆ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಕೊರೊನಾ ಮತ್ತು ಓಮಿಕ್ರೋನ್ ಎಂಬ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದ್ದಂತಹ ಸಂಕಷ್ಟ ಪರಿಸ್ಥಿಯಲ್ಲಿ ಹಣಕ್ಕಿಂತ ಆರೋಗ್ಯ ಎಷ್ಷು ಮುಖ್ಯ ಎಂಬುದು ನಮಗೆ ಗೊತ್ತಾಯಿತು . ಹಾಗಾಗಿ ಎಲ್ಲಾ ಆರೋಗ್ಯ ಸೌಲಭ್ಯಗಳು ಪ್ರತಿ ಗ್ರಾಮದ ನಾಗರಿಕರಿಗೆ ಸಿಗಬೇಕು ಎಂಬ ಉದ್ದೇಶದಿಂದ ಈ ತಾಲ್ಲೂಕು ಮಟ್ಟದ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಹಿರಿಯೂರು ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಬೇಕು. ಈ ತಾಲ್ಲೂಕು ಮಟ್ಟದ ಶಿಬಿರ ತಾಲ್ಲೂಕಿನ ಸುತ್ತ-ಮುತ್ತಲ ಹಳ್ಳಿಗಳಿಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸರ್ಕಾರವು ಸಾರ್ವಜನಿಕರಿಗಾಗಿ ಸಾಕಷ್ಷು ಯೋಜನೆಗಳನ್ನು ಹಮ್ಮಿಗೊಂಡಿದ್ದು, ಗರ್ಭಿಣಿ ಸ್ತ್ರೀಯರಿಗೆ ಪೋಷಕಾಂಶಗಳ ಆಹಾರ ಅಗತ್ಯ ಔಷಧಿ ಮಾತ್ರೆಗಳನ್ನು ಆಶಾಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ಸರಬರಾಜು ಮಾಡುತ್ತಿದ್ದು ಗರ್ಭಿಣಿ ಸ್ತ್ರೀಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದರಿಂದ ಸಾವಿನ ಪ್ರಮಾಣ ಕಡಿಮೆ ಯಾಗಿದೆ ಎಂದರು.
ತಾಲ್ಲೂಕಿನ ಆರೋಗ್ಯ ಕೇಂದ್ರದಲ್ಲಿ ಈಗ 14 ಕ್ಕೂ ಹೆಚ್ಚು ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಜನರಿಗೆ ಇನ್ನು ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಗರದ ಹೊರವಲಯದ ಆದಿವಾಲ ಬಳಿ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು.
ನಗರದಲ್ಲಿ ಆಸ್ಪತ್ರೆ ನಿರ್ಮಿಸುವಷ್ಟು ದೊಡ್ಡ ಜಾಗಯಿಲ್ಲದಿರಿಂದ ನಗರದ ಹೊರವಲಯದ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರ ಅಲ್ಲಿಯವರೆಗೂ ಬೆಳೆಯಲಿದ್ದು, ಅದೇ ಪ್ರದೇಶದಲ್ಲಿ ಮಿನಿ ವಿಧಾನ ಸೌಧ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ನಿರ್ಮಾಣವಾಗುವುದರಿಂದ ಅಲ್ಲಿಗೆ ಬಸ್ ವ್ಯವಸ್ಥೆ ಉತ್ತಮವಾಗಿರುತ್ತದೆ ಎಂದು ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ಪ್ರಾಸ್ಥಾವಿಕ ನುಡಿಗಳನ್ನಾಡಿದ ನೋಡಲ್ ಅಧಿಕಾರಿಗಳಾದ ಡಾ.ರೇಣುಕಾಪ್ರಸಾದ್, ಸರ್ಕಾರದ ಮಾರ್ಗ ಸೂಚಿಯಂತೆ ಈ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದ್ದು, ಈ ಮೇಳದಲ್ಲಿ ಹೃದಯ ರೋಗ ತಜ್ಞರು, ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ನೇತ್ರ ತಜ್ಞರು, ದಂತ ವೈದ್ಯರು ಸೇರಿದಂತೆ ವಿವಿಧ ವೈದ್ಯಕೀಯ ತಜ್ಞರು ಭಾಗವಹಿಸಲಿದ್ದು ನಗರದ ನಾಗರೀಕರು ಇದರ ಈ ಶಿಬಿರದ ಸದುಪಯೋಗವನ್ನು ಪಡೆಯುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಶ್ರೀಮತಿ ಶಂಷುನ್ನಿಸಾ, ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ಪೌರಾಯುಕ್ತ ಡಿ.ಉಮೇಶ್, ತಾ.ಪಂ.ಇ.ಒ. ಈಶ್ವರಪ್ರಸಾದ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್, ತಾಲ್ಲೂಕು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರೇಣುಕಾ ಪ್ರಸಾದ್, ಡಿಟಿಒ ಡಾ.ಮಂಜುನಾಥ್, ಡಾ.ರೂಪ, ಡಾ.ಸುಧಾ, ಎಎಂಒ ಕುಮಾರ್ ನಾಯ್ಕ್, ಡಾ.ಗಿರೀಶ್, ವಿನಯ್, ಚಂದ್ರಶೇಖರ್, ಪೋಲೀಸ್ ಅಧಿಕಾರಿಗಳಾದ ಶಿವಕುಮಾರ್, ರಾಘವೇಂದ್ರ ಸೇರಿದಂತೆ ಆರೋಗ್ಯಇಲಾಖೆ ಸಿಬ್ಬಂದಿ, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


