ದಿನೇ ದಿನೇ ಕಚ್ಛಾ ಕಾಗದ ಹಾಗೂ ಮುದ್ರಣ ಸಾಮಾಗ್ರಿಗಳ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಮುದ್ರಣಕ್ಕೆ ಎದುರಾಗಿರುವ ಸಮಸ್ಯೆಯನ್ನು ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪರಿಹರಿಸಬೇಕು ಎಂದು ಕರ್ನಾಟಕ ಪಠ್ಯ ಪುಸ್ತಕ ಮುದ್ರಕರ ಸಂಘ ಇಂದು ಪ್ರತಿಭಟನೆ ನಡೆಸಿತು.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ(ಫ್ರೀಡಂಪಾರ್ಕ್) ಅಸೋಸಿಯೇಷನ್ ಅಧ್ಯಕ್ಷರಾದ ಸತ್ಯಕುಮಾರ್, ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಖಜಾ0ಚಿ ನಾಗಸುಂದರ್ , ವಿ.ಶ್ರೀನಿವಾಸ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಮುದ್ರಣ ವಿಭಾಗದ ನೂರಾರು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಪಠ್ಯ ಪುಸ್ತಕ ಮುದ್ರಕರ ಸಂಘದ ಅಧ್ಯಕ್ಷ ಸತ್ಯಕುಮಾರ್ ಅವರು, ಒಂದು ಟನ್ ಕಾಗದದ ಬೆಲೆ ಸುಮಾರು 60 ಸಾವಿರ ರೂ.ನಿಂದ 90 ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಹೀಗಾದರೆ ನಾವು ಉದ್ಯಮ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.ಮುದ್ರಣದ ಮೂಲ ಸಾಮಗ್ರಿಗಳಾದ ಇಂಕು, ಪ್ಲೇಟ್, ಕೆಮಿಕಲ್ಸ್, ಕಾಗದ ಸೇರಿದಂತೆ ಎಲ್ಲಾ ಕಚ್ಚಾ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದು, ಪಠ್ಯ ಪುಸ್ತಕ, ವೃತ್ತ ಪತ್ರಿಕೆ ಹಾಗೂ ಲೇಖನ ಸಾಮಗ್ರಿಗಳನ್ನು ಮುದ್ರಣ ಮಾಡಲಾಗದಂತಹ ತೀವ್ರ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ರಾಜ್ಯ ಸರ್ಕಾರ ಮುದ್ರಕರ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾಗದ ಸರಬರಾಜು ಮಾಡುವ ಮಿಲ್‍ಗಳಿಗೆ ಸ್ಪಷ್ಟ ಸೂಚನೆ ನೀಡಿ ಸ್ಥಳೀಯ ಮುದ್ರಕರ ಬೇಡಿಕೆಗೆ ಅನುಗುಣವಾಗಿ ಅಗತ್ಯವಿರುವ ಕಾಗದಗಳನ್ನು ಆದ್ಯತೆ ಮೇಲೆ ಪೂರೈಸಲು ಆದೇಶ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು. ವೃತ್ತ ಪತ್ರಿಕೆಗಳ ಕಾಗದದ ಬೆಲೆಯೂ ದುಪ್ಪಟ್ಟಾಗಿದ್ದು, ಪತ್ರಿಕೆಗಳ ದೈನಂದಿನ ಮುದ್ರಣಕ್ಕೆ ತೀವ್ರ ಸಂಕಷ್ಟ ಎದುರಿಸುತ್ತಿವೆ. ಇದೇ ರೀತಿ ಬೆಲೆ ಏರಿಕೆ ಮುಂದುವರಿದರೆ ಪತ್ರಿಕೆಗಳು ಮುದ್ರಣವನ್ನೇ ನಿಲ್ಲಿಸಬೇಕಾದ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುದ್ರಕರು ಪುಸ್ತಕಗಳ ಮುದ್ರಣಕ್ಕೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದ್ದು, ಮುಂಗಡವಾಗಿ ಹಣ ಪಾವತಿ ಮಾಡಿದರೂ ಮುದ್ರಣ ಕಾಗದ ದೊರೆಯದ ಸ್ಥಿತಿ ಇದೆ. ಮಾರ್ಚ್‍ನಿಂದ ಜೂನ್ ಅವಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಮುದ್ರಕರು ಶಾಲೆಗಳಿಗೆ ಅಗತ್ಯವಿರುವ ಪಠ್ಯ ಪುಸ್ತಕ ಮುದ್ರಣವನ್ನು ಹೆಚ್ಚು ಮಾಡುತ್ತಾರೆ.
ಆದರೆ ಈ ಪರಿಸ್ಥಿತಿಯ ಲಾಭ ಪಡೆಯುವ ಉದ್ದೇಶದಿಂದ ಕಾಗದ ಸರಬರಾಜು ಮಾಡುವ ಮಿಲ್‍ಗಳು ಕಾಗದದ ದರವನ್ನು ಹೆಚ್ಚಳ ಮಾಡಿವೆ. ಅಲ್ಲದೆ, ಸ್ಥಳೀಯರಿಗೆ ಕಾಗದ ಸರಬರಾಜು ಮಾಡದೆ ರಫ್ತು ಮಾಡುತ್ತಿವೆ. ಇದು ಮುದ್ರಣದ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ವಿವರಿಸಿದರು.
ಸಣ್ಣ ಕೈಗಾರಿಕೆಗಳು ಹಲವು ವರ್ಷಗಳಿಂದ ಮುದ್ರಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಏಕಾಏಕಿ ದುಪ್ಪಟ್ಟಾಗಿರುವ ಮುದ್ರಣ ಸಾಮಗ್ರಿಗಳ ಬೆಲೆಯಿಂದ ಮುದ್ರಣ ಸಂಸ್ಥೆಗಳು ಇನ್ನಿಲ್ಲದ ತೊಂದರೆಗೆ ಒಳಗಾಗಿದ್ದು, ಮುಚ್ಚುವ ಹಂತಕ್ಕೆ ತಲುಪಿವೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಾಗದ ಸರಬರಾಜು ಮಾಡುವ ಮಿಲ್‍ಗಳ ಪ್ರತಿನಿಗಳೊಂದಿಗೆ ತುರ್ತಾಗಿ ಸಭೆ ನಡೆಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು ಮುದ್ರಣ ಕಾಗದದ ಕೊರತೆ ನೀಗಿಸಲು ತುರ್ತು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಸ್ಥಗಿತವಾಗಿರುವ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಕಾರ್ಯಾರಂಭ ಮಾಡಿದರೆ ರಾಜ್ಯ ಎದುರಿಸುತ್ತಿರುವ ಕಚ್ಚಾ ಕಾಗದದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟದಿಂದಾಗಿ ಮುದ್ರಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇನ್ನೂ ಅದರಿಂದ ಹೊರಬಂದಿಲ್ಲ. ಈ ನಡುವೆ ಮುದ್ರಣ ಕಾಗದದ ಬೆಲೆ ಏರಿಕೆಯು ದೊಡ್ಡ ಸಂಕಷ್ಟವನ್ನೇ ತಂದೊಡ್ಡಿದೆ. ದಿನದಿಂದ ದಿನಕ್ಕೆ ಮುದ್ರಣ ಕಾಗದದ ಬೆಲೆ ಗಗನಮುಖಿಯಾಗಿ ಏರಿಕೆಯಾಗುತ್ತಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ಹೊರಹಾಕಿದರು.
ರಾಜ್ಯದಲ್ಲಷ್ಟೇ ಅಲ್ಲದೆ, ದೇಶಾದ್ಯಂತ ಮುದ್ರಣ ಕಾಗದದ ಬೆಲೆ ಏರಿಕೆಯಾಗಿದ್ದು, ಸಕಾಲದಲ್ಲಿ ಮುದ್ರಣದ ಕಾಗದ ದೊರೆಯದೆ ಇರುವುದರಿಂದ ನಿಗದಿತ ಅವಯಲ್ಲಿ ಪುಸ್ತಕಗಳನ್ನು ಮುದ್ರಿಸಲಾಗದ ಸ್ಥಿತಿಗೆ ತಲುಪಿದ್ದೇವೆ. ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಸತ್ಯಕುಮಾರ್ ಉದ್ಯಮ ಎದುರಿಸುತ್ತಿರುವ ಸಂಕಷ್ಟವನ್ನು ತೆರೆದಿಟ್ಟರು.
ವರದಿ ಆಂಟೋನಿ ಬೇಗೂರು


